ಬಂಟ್ವಾಳ: ಶಂಭೂರು ಗ್ರಾಮದ ಬೊಂಡಾಲ ಎಂಬಲ್ಲಿ ಕಟೀಲು ಮೇಳದ ಹಿರಿಯ ಕಲಾವಿದರಾದ ನಗ್ರಿ ಮಹಾಬಲ ರೈ ಮತ್ತು ಕುಮಾರ ಪಡ್ರೆ ಅವರಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬೊಂಡಾಲ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ರೈ, ಯಕ್ಷಗಾನ ಕಲೆ ಜನರ ಧಾರ್ಮಿಕ ನಂಬಿಕೆಯೊಂದಿಗೆ ಬೆಳೆದುಬಂದಿದ್ದು, ಇದರಲ್ಲಿ ಸಂಪದ್ಭರಿತ ಸಾಹಿತ್ಯ ಅಡಗಿದೆ ಎಂದರು.
ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ.ಬೊಂಡಾಲ ರಾಮಣ್ಣ ಶೆಟ್ಟಿ ಸ್ಮರಣಾರ್ಥ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಳೆದ ಹಲವು ವರ್ಷಗಳಿಂದದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದ್ದು, ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವ ಪರಂಪರೆ ನಡೆದುಬಂದಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹೇಳಿದರು.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಿ, ಟ್ರಸ್ಟ್ ಕಾರ್ಯವನ್ನು ಶ್ಲಾಘಿಸಿದರು.
ಕೃಷಿಕ, ಕಲಾವಿದ ಶ್ರೀನಿವಾಸ ರಾಯಸ, ಟ್ರಸ್ಟಿ ಸೀತಾರಾಮ ಶೆಟ್ಟಿ, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು. ಹವ್ಯಾಸಿ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.