ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಮಾರ್ಚ್ ತಿಂಗಳ 4ರಿಂದ 13ರವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಾರ್ಚ್ 5ರಂದು ನಡೆಯುವ ಹೊರೆಕಾಣಿಕೆಯ ಪೂರ್ವಸಿದ್ಧತೆಗಾಗಿ ಬಂಟ್ವಾಳ ತಾಲೂಕಿನ ಭಕ್ತರ ಸಭೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯಲ್ಲಿ ಗುರುವಾರ ಸಂಜೆ ನಡೆಯಿತು.
ಈ ಸಂದರ್ಭ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ, ಪೊಳಲಿ ಕ್ಷೇತ್ರದ ಮಹತ್ವವನ್ನು ಅರಿತುಕೊಂಡು ತಾಯಿಯ ಆಶೀರ್ವಾದವನ್ನು ಪಡೆದುಕೊಂಡು ತಾಲೂಕಿನ ಎಲ್ಲ ಭಕ್ತರೂ ಒಟ್ಟಾಗಿ ಈ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಬೇಕು. ಮಾರ್ಚ್ 5ರಂದು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಇರುವ ಮೈದಾನದಲ್ಲಿ ಒಟ್ಟು ಸೇರಿ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರ ತಲುಪುವ ಸಂದರ್ಭ ಸಹಸ್ರಾರು ಮಂದಿ ಭಕ್ತರು ಒಟ್ಟಾಗಿ ದೇವರ ಸೇವೆಯಲ್ಲಿ ಪಾಲ್ಗೊಳ್ಳಬೇಕು, ಹೊರೆಕಾಣಿಕೆ ಮೆರವಣಿಗೆಯಲ್ಲಿ ಪ್ರತೀ ಗ್ರಾಮ ಮಟ್ಟದಿಂದ ಗರಿಷ್ಟ ಸಂಖ್ಯೆಯಲ್ಲಿ ಭಕ್ತರು ಹಸಿರುವಾಣಿ ಹೊರೆಕಾಣಿಕೆಯೊಂದಿಗೆ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಬೃಹತ್ ಗಾತ್ರದ ಮಣ್ಣಿನ ವಿಗ್ರಹ ಹೊಂದಿರುವ ಏಕೈಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಬ್ರಹ್ಮಕಲಶೋತ್ಸವ ಮತ್ತು ಹೊರೆಕಾಣಿಕೆಯಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಸುಯೋಗ ಎಂದರು.
ಹೊರೆಕಾಣಿಕೆ ಸಮಿತಿಯ ಬಂಟ್ವಾಳ ತಾಲೂಕು ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಅವರು ಹೊರೆಕಾಣಿಕೆಯ ಕುರಿತು ಮಾಹಿತಿ ನೀಡಿದರು. ಈಗಾಗಲೇ ಹುಬ್ಬಳ್ಳಿ ಭಕ್ತರೊಬ್ಬರು ಕ್ಷೇತ್ರಕ್ಕೆ 80 ಕ್ವಿಂಟಾಲ್ ಬೆಲ್ಲ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಬಿಲ್ಲವ ಮುಖಂಡ ಕೆ.ಸೇಸಪ್ಪ ಕೋಟ್ಯಾನ್ 108 ಕ್ವಿಂಟಾಲ್ ಮತ್ತು ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು 50 ಕ್ವಿಂಟಾಲ್ ಅಕ್ಕಿ ನೀಡುವುದಾಗಿ ಪ್ರಕಟಿಸಿದ್ದಾರೆ ಎಂದರು. ಕ್ಷೇತ್ರದ ಮಾಗಣೆ ಗ್ರಾಮಗಳಾದ ಪುದು, ಕೊಡ್ಮಾಣ್, ಅಮ್ಮುಂಜೆ, ಮೇರಮಜಲು ಗ್ರಾಮದಿಂದ ಮಾ.4ರಂದು ಉಗ್ರಾಣ ಮುಹೂರ್ತಕ್ಕೆ ಹಸಿರುವಾಣಿ ಸಮರ್ಪಣೆಯಾಗಲಿದೆ. ಮಾ 5ರಂದು ತಾಲ್ಲೂಕಿನ 84 ಗ್ರಾಮಗಳ ಭಕ್ತರು ಹೊರೆಕಾಣಿಕೆಯಲ್ಲಿ ದೀರ್ಘ ಬಾಳಿಕೆ ಬರುವ ತರಕಾರಿ ಮತ್ತು ಟೈಗರ್ ಬ್ರ್ಯಾಂಡಿನ ಅಕ್ಕಿ ನೀಡುವಂತೆ ಅವರು ವಿನಂತಿಸಿಕೊಂಡರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಬಡವ, ಶ್ರೀಮಂತ, ರಾಜಕೀಯ ಪಕ್ಷಗಳ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಸೇರುವ ಸಂದರ್ಭ ನಮಗೆ ಒದಗಿ ಬಂದಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಯಾವುದೇ ಜಾತಿ ಮತ್ತು ಪಕ್ಷಬೇಧವಿಲ್ಲದೆ ಎಲ್ಲರೂ ಒಗ್ಗೂಡಿ ಹೊರೆಕಾಣಿಕೆ ಮೆರವಣಿಗೆ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಎಲ್ಲಾ ಭಕ್ತರು ಸಕ್ರಿಯವಾಗಿ ಪಾಲ್ಗೊಳ್ಳುವ ಬಗ್ಗೆ ಗ್ರಾಮ ಸಮಿತಿ ಸದಸ್ಯರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಮೂಡುಶೆಡ್ಡೆ, ಸಾಮಾಜಿಕ ಕಾರ್ಯಕರ್ತ ಕೈಯೂರು ನಾರಾಯಣ ಭಟ್, ಬಿಜೆಪಿ ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಮತ್ತಿತರರು ಮಾತನಾಡಿ, ಹೊರೆಕಾಣಿಕೆ ಮೆರವಣಿಗೆ ಯಶಸ್ವಿಗೊಳಿಸಲು ವಿವಿಧ ಸಲಹೆ ನೀಡಿದರು.
ರಾಜ್ಯ ಬಾಲಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ರವೀಂದ್ರ ಕಂಬಳಿ, ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಬಿಲ್ಲವ ಮುಖಂಡ ರಾಮದಾಸ್ ಕೋಟ್ಯಾನ್, ಉದ್ಯಮಿ ಭುವನೇಶ ಪಚ್ಚಿನಡ್ಕ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಿನೇಶ ಅಮ್ಟೂರು, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ ಮತ್ತಿತರರು ಇದ್ದರು.
ಬೇಬಿ ಕುಂದರ್ ಸ್ವಾಗತಿಸಿ, ಕುಲಾಲ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಡಿ.ಎಂ.ಕುಲಾಲ್ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ದಾನಿಗಳಿಂದ ಹೊರೆಕಾಣಿಕೆಗೆ ಕೊಡುಗೆಗಳನ್ನು ಘೋಷಿಸಲಾಯಿತು.