ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಕಲ್ಲಡ್ಕ: ಸಹೋದರ ಪ್ರಧಾನಮಂತ್ರಿಯಾದ ಕಾರಣ ಸಮಾಜ ನಮ್ಮನ್ನು ವಿಶೇಷ ಆದರದಿಂದ ಕಾಣುತ್ತಿರುವುದರ ಬಗ್ಗೆ ಸಂತೋಷವಿದೆ. ಆದರೆ ಎಲ್ಲೂ ನಮ್ಮ ಕುಟುಂಬವು ಅವರ ಜವಾಬ್ದಾರಿ ನಿರ್ವಹಣೆಗೆ ತೊಡಕಾಗದಂತೆ ಎಚ್ಚರವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ ಮೋದಿ ಹೇಳಿದರು.
ಗುರುವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆ ವೀಕ್ಷಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಅವರು ನಡೆಸಿದರು.
ನರೇಂದ್ರ ಮೋದಿಯವರದ್ದು ಸಮಾಜ ಸಮರ್ಪಕ ಬದುಕು, ದೇಶದ ಬಗೆಗಿನ ಅವರ ಕಾಳಜಿ ದೊಡ್ಡದು. ಬಾಲ್ಯದಿಂದಲೂ ಪ್ರತಿಯೊಂದು ಕಾಲದಲ್ಲೂ ಶಿಸ್ತುಬದ್ಧ ಜೀವನ ನಡೆಸಿದರು. ನಮಗ್ಯಾರಿಗೂ ಅವರ ಹುದ್ದೆಯ ನಡುವೆ ನಾವೂ ಗುರುತಿಸಿಕೊಳ್ಳುವಂತಾಗಬೇಕು ಎಂದು ಅನಿಸಲೇ ಇಲ್ಲ ಎಂದರು.
ಇಲ್ಲಿ ಜೀವನಕೌಶಲ್ಯದ ಶಿಕ್ಷಣವನ್ನು, ಸಂಸ್ಕಾರ ಹಾಗೂ ಭಾರತೀಯ ನೆಲೆಗಟ್ಟಿನಆಧಾರದಲ್ಲಿ ನೀಡಲಾಗುತ್ತಿದೆ. ದಕ್ಷಿಣ ಭಾರತ ಜನರ ಬಗ್ಗೆ ನನಗಿದ್ದ ಭಾವನೆ ಬದಲಾಗಿದೆ. ಇಲ್ಲಿನ ಜನ ಪ್ರೇಮಪೂರ್ಣ, ಸೌಹಾರ್ದಯುತ, ಭಾವನಾ ಜೀವಿಗಳಾಗಿರುವುದು ನನ್ನ ಅರಿವಿಗೆ ಬಂದಿದೆ. ವ್ಯಕ್ತಿಯೊಬ್ಬಯಾವ ಮಟ್ಟಕ್ಕೆ ಏರಿದರೂ ದೇಶದ ಮುಂದೆ ಎಲ್ಲರೂ ಸಮಾನರು. ತಾನು ಇರುವ ಹುದ್ದೆಯ ಜವಾಬ್ದಾರಿ ಅರಿತು ವ್ಯವಹರಿಸಿದರೆ ಆತ ಶ್ರೇಷ್ಠ ಮಾನವನಾಗುತ್ತಾನೆ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ಜ್ಯೋತಿಷ್ಯರಾದ ಶಿವಗಿರಿ ಮಹಾರಾಜ್, ತೆಲಂಗಾಣ ಸಂಸ್ಕೃತ ಶಿಶುಮಂದಿರದ ಪ್ರವೀಣ್ ಕೊರೊಲ್‌ಪೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಸುನಿಲ್ ಕುಲಕರ್ಣಿ, ಉದ್ಯಮಿ ದೀಪಕ್ ರಾವ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷಡಾ. ಪ್ರಭಾಕರ ಭಟ್, ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ ಎನ್, ಡಾ. ಕಮಲಾ ಪ್ರಭಾಕರ ಭಟ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ, ಧನ್ಯವಾದಗೈದರು.