ಬಂಟ್ವಾಳ

ತಾಲೂಕು ಪಂಚಾಯತ್ ಸಭೆಯಲ್ಲಿ ಮಾತಿನ ಸಮರಕ್ಕೆ ಕಾರಣವಾದ ಉಜ್ವಲ ಸಮಾವೇಶ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಮಂಗಳವಾರ ಬಿ.ಸಿ.ರೋಡಿನಲ್ಲಿ ನಡೆದ ತಾಪಂ ಮಾಸಿಕ ಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಸಂಬಂಧಿಸಿದ ಜನಪ್ರತಿನಿಧಿಗಳ ಭರಪೂರ ಮಾತಿನ ಚಕಮಕಿಗೆ ವೇದಿಕೆ ಒದಗಿಸಿದ್ದು ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿ.ಸಿ.ರೋಡಿನಲ್ಲಿ ನಡೆದ ಉಜ್ವಲ ಸಮಾವೇಶ.

ಸಮಾವೇಶದಲ್ಲಿ ಫಲಾನುಭವಿಗಳ ಆಯ್ಕೆಯಿಂದ ಹಿಡಿದು, ದಿನ ನಿಗದಿಯವರೆಗೆ ಯಾವ ಮಾನದಂಡ ಬಳಕೆಯಾಗಿದೆ ಎಂಬುದನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವ ಮಾವೆ ಪ್ರಶ್ನಿಸಿದ್ದು ಬಿಜೆಪಿ ಸದಸ್ಯರ ಆಕ್ಷೇಪಕ್ಕೆ ಕಾರಣವಾಯಿತು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಉತ್ತರಿಸಿ, ಇದನ್ನು ಗ್ಯಾಸ್ ಏಜನ್ಸಿಗಳು ನಿರ್ವಹಿಸುತ್ತಾರೆ ಎಂದರೆ, ಬಿಜೆಪಿಯ ತಾಪಮ ಸದಸ್ಯರಾದ ರಮೇಶ್ ಕುಡ್ಮೇರು ಇದಕ್ಕೆ ಪೂರಕವಾಗಿ ಮಾತನಾಡಿದರು. ಆದರೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಸವಲತ್ತು ವಿತರಿಸಲು ಅವಕಾಶ ಇದೆಯೇ ಎಂದು ಮಂಜುಳಾ ಮಾವೆ ಆಕ್ಷೇಪಿಸಿದರು. ಜಿಪಂ ಸದಸ್ಯರು ಸಲಹೆಯಷ್ಟೇ ನೀಡಬಹುದು ಎಂದು ತಾಪಂ ಸದಸ್ಯ ಪ್ರಭಾಕರ ಪ್ರಭು ಹೇಳಿದರು. ಈ ಸಂದರ್ಭ ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ತಾಪಂ ಸದಸ್ಯ ಯಶವಂತ ಪೊಳಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತಮ್ಮನ್ನು ಕಡೆಗಣಿಸಿದ್ದನ್ನು ಉದಾಹರಣೆ ಸಹಿತವಾಗಿ ಮಾತನಾಡಿದರೆ, ಕಾಂಗ್ರೆಸ್ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ತಹಶೀಲ್ದಾರ್ ರಶ್ಮಿ ಜಿಲ್ಲಾಡಳಿತವನ್ನು ಸಂಪರ್ಕಿಸಿ ಗ್ರಾಪಂ ಮೂಲಕ ಅರ್ಹ ಫಲಾನುಭವಿಗಳಿಗೆ ಸವಲತ್ತು ತಲುಪುವಂತಾಗಬೇಕು ಎಂದು ಮಾಹಿತಿ ನೀಡಿದರು.

ಕುಡಿಯುವ ನೀರಿನ ಸಮಸ್ಯೆ:

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆಗಳು ನಡೆದವು. ಕರೋಪಾಡಿ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಸಂಪರ್ಕವಿರುವ ಪ್ರದೇಶವಾದ ಮಿತ್ತನಡ್ಕ-ಬೇಡಗುಡ್ಡೆ-ದೇವಸ್ಯ ಮತ್ತು ಬೇಂಗದಪಡ್ಪು ಎಂಬಲ್ಲಿ ನೀರಿನ ಟ್ಯಾಂಕ್‌ಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ  ಎಂದು ತಾಪಂ ಸದಸ್ಯ ಉಸ್ಮಾನ್ ಕರೋಪಾಡಿ ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಜಿಪಂ ಸದಸ್ಯ ತುಂಗಪ್ಪ ಬಂಗೇರ, ಸಂಗಬೆಟ್ಟು ಗ್ರಾಮ ಸಹಿತ ಇನ್ನಿತರ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 2 ವರ್ಷಗಳ ಹಿಂದೆಯೇ ಪೈಪ್‌ಲೇನ್ ಸಹಿತ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೂ, ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದರು. ಸಂಗಬೆಟ್ಟುವಿನ ಕರಿಮಳೆ ಎಂಬಲ್ಲಿ ಹೊಸಪಂಪು ಕಾಮಗಾರಿ ಪ್ರಗತಿಯಲ್ಲಿದ್ದು, ಈ ತಿಂಗಳ ಕೊನೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅದೇ ರೀತಿ ಕರೋಪಾಡಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಿಂದ ತೊಟ್ಟಿಗಳಿಗೆ ನೀರನ್ನು ತುಂಬಿಸುವ ಪ್ರಕ್ರಿಯೆ ನಿಧಾನವಾಗಿರುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದಾಗ, ಶೀಘ್ರವಾಗಿ ಸಮಸ್ಯೆ ಪರಿಹಾರ ಮಾಡುವಂತೆ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಸೂಚನೆ ನೀಡಿದರು.

ಗುಣಮಟ್ಟವಿಲ್ಲದ ಸೈಕಲ್‌ಗಳನ್ನು ಮಕ್ಕಳಿಗೆ ವಿತರಣೆ ಮಾಡಿರುವ ಬಗ್ಗೆ ಸದಸ್ಯ ರಮೇಶ್ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಸರಕಾರ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಆದೇಶ ನೀಡಿದ್ದರಿಂದ ತಾಲೂಕಿನಲ್ಲಿ ಸೈಕಲ್‌ಗಳ ವಿತರಣೆ ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ಗುಣಮಟ್ಟವಿರುವ ಸೈಕಲ್‌ಗಳನ್ನು ವಿತರಿಸಲು ಆದೇಶಿಸಿದ್ದು, ಈ ನಿಟ್ಟಿನಲ್ಲಿ ವಿತರಣೆ ಮಾಡಲಾಗಿದೆ. ವಿತರಿಸಿದ ಸೈಕಲ್‌ಗಳನ್ನು ಗುಣಮಟ್ಟ ಇಲ್ಲದಿದ್ದಲ್ಲಿ ಅದನ್ನು ಹಿಂದಿರುಗಿಸುವಂತೆ ಶಾಲೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಬಿಇಒ ಶಿವಪ್ರಕಾಶ್ ಸಭೆಗೆ ತಿಳಿಸಿದರು.

ಮಾರ್ಚ್ ತಿಂಗಳಲ್ಲಿ ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆ ತಿಂಗಳಲ್ಲಿ ಕ್ರಿಕೆಟ್ ಸಹಿತ ಇನ್ನಿತರ ಪಂದ್ಯಾಟಗಳಿಗೆ ಅನುಮತಿ ನೀಡಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಸಭೆಯನ್ನು ಒತ್ತಾಯಿಸಿದಾಗ, ಈ ವಿಚಾರವನ್ನು ಸ್ವಾಗತಿಸಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಮಾ.10ರಂದು ಪಲ್ಸ್ ಪೋಲಿಯೋ:

ಮಾರ್ಚ್ 10ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ಆಯೋಜಿಸಲಾಗಿದ್ದು, ತಾಲೂಕಿನ ೧೯೬ ಬೂತ್‌ಗಳಲ್ಲಿ ೩೦ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪಲ್ಸ್ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ೭೮೪ ವಿವಿಧ ಸಂಘಗಳ ಕಾರ್ಯಕರ್ತೆರಿಗೆ ತರಬೇತಿ ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ದೀಪಾ ಪ್ರಭು ಮಾಹಿತಿ ನೀಡಿರು.

ಪೋಡಿಮುಕ್ತ ಗ್ರಾಮ, ಅಕ್ರಮ ಸಕ್ರಮ, ಹಕ್ಕುಪತ್ರ ವಿತರಣೆ, ಭೂ ಮಂಜೂರಾತಿಯಾದ ಜಮೀನಿನ ಪರಭಾರೆ, ಶಾಲೆಗಳಿಗೆ ಆವರಣ ಗೋಡೆ ನಿರ್ಮಾಣ, ಕರೋಪಾಡಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ಬೆಂಜನಪದವು ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಯ ನಿರ್ಲಕ್ಷ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಂಗನವಾಡಿ ಕಾರ್ಯಕರ್ತರ ಬಳಕೆ ಹಾಗೂ ಇತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ತಹಶೀಲ್ದಾರ್ ರಶ್ಮಿ ಹಾಜರಿದ್ದರು. ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts