ಬಂಟ್ವಾಳ: ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಕಾರಣೀಕ ಸಾನಿಧ್ಯವಾದ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರವನ್ನು ಪುನರ್ ನಿರ್ಮಿಸಲು ಸಂಕಲ್ಪಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಫೆಬ್ರವರಿ 14 ರಂದು ಬೆಳಿಗ್ಗೆ 8.55ರ ಮೀನಲಗ್ನ ಸುಮೂಹೂರ್ತದಲ್ಲಿ ಶಿಲಾನ್ಯಾಸ ಸಮಾರಂಭ ನಡೆಯಲಿದೆ. ಕನ್ಯಾಡಿ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಂನ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸುವರು. ವಾಸ್ತುಶಿಲ್ಪಿ ರಮೇಶ ಕಾರಂತ ಬೆದ್ರಡ್ಕ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಪುರೋಹಿತರಾದ ಕೇಶವ ಶಾಂತಿ ನಾಟಿ ವೈಧಿಕ ವಿಧಿವಿಧಾನ ನೆರವೇರಿಸುವರು.
ಸುಮಾರು ಎಂಟುನೂರು ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಕ್ಷೇತ್ರವನ್ನು ಸುಮಾರು 2.5ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಿಸಲು ಸಂಕಲ್ಪಿಸಲಾಗಿದೆ. ಬಂಟ್ವಾಳ ಕಸಬಾ ಗ್ರಾಮದ ಕಾರಂಬಡೆ ಎಂಬಲ್ಲಿ ಪ್ರಕೃತಿ ರಮಣೀಯ ಹಚ್ಚಹಸಿರ ಸುಂದರ ಪರಿಸರದಲ್ಲಿರುವ ಶ್ರೀ ಕ್ಷೇತ್ರವು ಭಕ್ತಜನತೆಯ ಇಷ್ಠಾರ್ಥ ಸಿದ್ಧಿಸುವ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದ್ದು ಕ್ಷೇತ್ರದಲ್ಲಿ ಮಹಮ್ಮಾಯಿಯೊಂದಿಗೆ ಶ್ರೀ ಗಣಪತಿ, ಶ್ರೀ ಗುರು, ಶ್ರೀ ನಾಗಬ್ರಹ್ಮ, ಶ್ರೀ ರಕ್ತೇಶ್ವರೀ, ಗುಳಿಗ, ಕಾಳಬೈರವ, ಪಂಜುರ್ಲಿ, ಕೊರಗಜ್ಜ ಮೊದಲಾದ ದೈವದೇವರ ಸಾನಿಧ್ಯವಿದೆ. ಇದೀಗ ಎಲ್ಲಾ ದೈವದೇವರಿಗೆ ನೂತನ ಸಾನಿಧ್ಯಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಹಾಗೂ ಭಕ್ತಜನತೆ ಕಾರ್ಯಪ್ರವೃತ್ತವಾಗಿದ್ದು ಈಗಾಗಲೇ ಬಾಲಾಲಯ ಪ್ರತಿಷ್ಠೆ ಸಹಸ್ರಾರು ಭಕ್ತಾದಿಗಳು, ಗಣ್ಯರ ಸಮಕ್ಷಮದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈಗಾಗಲೇ ಶ್ರಮದಾನ ಸೇವೆಗಳು ಆರಂಭಗೊಂಡಿದ್ದು ಕ್ಷೇತ್ರದ ಪುನರ್ ನಿರ್ಮಾಣ ವಿದ್ಯುಕ್ತವಾಗಿ ಆರಂಭಗೊಳ್ಳುವರೇ ಶಿಲಾನ್ಯಾಸ ಸಮಾರಂಭವನ್ನು ಆಯೋಜಿಸಲಾಗಿದೆ. ಊರಪರವೂರ ಭಕ್ತಜನತೆ ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾಗಿ ಕ್ಷೇತ್ರದ ಆಡಳಿತ ಮೊಕ್ತೇಸರ ಅರುಣ್ ಕುಮಾರ್ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ ವಿನಂತಿಸಿದ್ದಾರೆ.
( ವರದಿ: ಗೋಪಾಲ ಅಂಚನ್)