ಬಂಟ್ವಾಳ: ಕೂಟ ಮಹಾಜಗತ್ತು ಸಾಲಿಗ್ರಾಮದ ಬಂಟ್ವಾಳ ಅಂಗಸಂಸ್ಥೆ ಹಾಗೂ ಕೂಟಮಹಾಜಗತ್ತು ಮಹಿಳಾ ವೇದಿಕೆ ಬಂಟ್ವಾಳ ಪ್ರಾಯೋಜಕತ್ವದಲ್ಲಿ ಲಕ್ಷ ನಾಮಾರ್ಚನೆ ಸಹಿತ ಸದ್ಗ್ರಹ ವಿಷ್ಣು ಸಹಸ್ರನಾಮ ಹವನವನ್ನು ವೇದಮೂರ್ತಿ ಶಿವರಾಮ ಮಯ್ಯ ಪೌರೋಹಿತ್ಯದಲ್ಲಿ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಿತು.
ಯಾಗದಲ್ಲಿ ವಿಶೇಷವಾಗಿ ದೀಕ್ಷೆ ಪಡೆದ 151 ಮಂದಿ ಕರ್ತೃಗಳು ಸಹಸ್ರನಾಮಾರ್ಚನೆ ಪಠಣಗಳೊಂದಿಗೆ ಲಕ್ಷ ತುಳಸಿ ಹಾಗೂ ಪರಮಾತ್ಮ ಶ್ರೀ ವಿಷ್ಣು ದೇವರಿಗೆ ಪ್ರಿಯವಾದ ತಾವರೆ ಹಾಗೂ ಕೆಂದಾವರೆ, ಮಲ್ಲಿಗೆ ಗಳಿಂದ ಅರ್ಚನೆಯನ್ನು ಪುರೋಹಿತರಾದ ರಾಜ ಐತಾಳ್ ಪೊಳಲಿ ಅವರೊಂದಿಗೆ ಕೂಟಮಹಾಜಗತ್ತು ಬಂಟ್ವಾಳ ಅಧ್ಯಕ್ಷರಾದ ನ್ಯಾಯವಾದಿ ನಾರಾಯಣ ಸೋಮಯಾಜಿ ಫರಂಗಿಪೇಟೆ ಮತ್ತು ಮಹಿಳಾ ವೇದಿಕೆ ಅಧ್ಯಕ್ಷರಾದ ವಿಜಯಲಕ್ಷ್ಮಿ ಸೀತಾರಾಮ್ ನೇತೃತ್ವದಲ್ಲಿ ನಡೆಸಲಾಯಿತು.
ಪ್ರಾತಃಕಾಲ 8 ಗಂಟೆಯಿಂದ ಎಲ್ಲ ಕರ್ತೃಗಳು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಜಗತ್ ಮಂದಿರದಲ್ಲಿ ನಿರ್ಮಿಸಲಾದ ಯಾಗಮಂಟಪದಲ್ಲಿ ಪೂಜಾ ಹವನ ಕಾರ್ಯಕ್ರಮಗಳನ್ನು ನಡೆಸಿದರು. ಪೂರ್ಣಾಹುತಿ ಬಳಿಕ ಅನ್ನಸಂತರ್ಪಣೆ ನಡೆಯಿತು. ಬಂಟ್ವಾಳ ಸುತ್ತಮುತ್ತಲಿನ 500ಕ್ಕೂ ಅಧಿಕ ಮಂದಿ ಆಗಮಿಸಿ ಶ್ರೀ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾದರು.