ವಾಮದಪದವು

ಪುನರ್‌ನಿರ್ಮಾಣದ ಸಂಭ್ರಮದಲ್ಲಿದೆ ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ

  • ಲೇಖನ: ಆಲದಪದವು ಗೋಪಾಲ ಅಂಚನ್
  • ಚಿತ್ರಗಳು: ಕಮಲ್ ಶೆಟ್ಟಿ ಬೊಳ್ಳಾಜೆ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

 

ಐತಿಹಾಸಿಕ ಹಿನ್ನೆಲೆಯ ಕಾರಣೀಕ ಕ್ಷೇತ್ರವಾಗಿ, ನಂಬಿ ಬಂದ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತಿರುವ ಪುಣ್ಯಕ್ಷೇತ್ರವೆಂದು ಪ್ರಸಿದ್ಧಿ ಪಡೆದಿರುವ ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಇದೀಗ ಪುನರ್‌ನಿರ್ಮಾಣದ ಸಂಭ್ರಮದಲ್ಲಿದೆ. ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪ್ರಕೃತಿ ರಮಣೀಯ ಹಚ್ಚಹಸಿರ ಸುಂದರ ಪರಿಸರದಲ್ಲಿರುವ ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ ತಾಮ್ರದ ಹೊದಿಕೆಯೊಂದಿಗೆ  ಎರಡಂತಸ್ತಿನ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ, ಗಣಪತಿ ಮತ್ತು ಶಾಸ್ತಾರ ಗುಡಿಗಳ ಪುನರ್‌ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಕಲ್ಪಿಸಲಾಗಿದೆ.

ಈಗಾಗಲೇ ನೂತನ ಬಯಲು ರಂಗಮಂದಿರ ಮತ್ತು ನೀರಿನ ಟ್ಯಾಂಕ್ ನಿರ್ಮಾಣಗೊಂಡಿದೆ. ಕ್ಷೇತ್ರ ಪುನರ್‌ನಿರ್ಮಾಣಗೊಂಡು ಮತ್ತೆ ತನ್ನ ಗತವೈಭವವನ್ನು ಸಾರಲು ಸಜ್ಜಾಗುತ್ತಿದ್ದು ಪುನರ್‌ನಿರ್ಮಾಣ ಕಾರ್‍ಯಕ್ಕೆ ಸಕಲ ಸಿದ್ಧತೆ ಆರಂಭಗೊಂಡಿದೆ. ಹಳೆಯ ಕೆರೆಯ ಪುನಚ್ಚೇತನ ಕಾಮಗಾರಿ, ನೂತನ ಗರ್ಭಗುಡಿ ಮತ್ತು ತೀರ್ಥಮಂಟಪಕ್ಕೆ ಸಂಬಂಧಿಸಿದ ಕಲ್ಲಿನ ಕೆತ್ತನೆ ಕೆಲಸ, ಕ್ಷೇತ್ರದ ಸುತ್ತಲಿನ ಆವರಣ ಸಮತಟ್ಟು ಕಾರ್‍ಯ, ಸಭಾಂಗಣ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ.

ಕ್ಷೇತ್ರದ ಐತಿಹಾಸಿಕ ಹಿನ್ನೆಲೆ: 

ಶ್ರೀ ಕ್ಷೇತ್ರವು ಅಜಿಲ ಸೀಮೆಯ ಪಟ್ಟ ದೇಗುಲವಾಗಿದ್ದು ಪರಿಸರದ ಏಳು ಗ್ರಾಮಗಳಿಗೆ ಆರಾಧ್ಯತಾಣವಾಗಿದೆ. ತುಳುನಾಡನ್ನು ಆಳಿದ್ದ ಮಯೂರವರ್ಮನ ಕಾಲದಲ್ಲಿ ಋಷಿವರ್ಯರಿಂದ ಇಲ್ಲಿನ ಮೂಲಬಿಂಬವನ್ನು ಪ್ರತಿಷ್ಠಾಪಿಸಲಾಗಿದೆ. ಪುರಾಣಕಾಲದಲ್ಲಿ ದಟ್ಟ ಕಾನನವಾಗಿದ್ದ ಈ ಪ್ರದೇಶದಲ್ಲಿ ತಾಯಿ ವನದುರ್ಗಾ ಸ್ವರೂಪಿಣಿಯಾಗಿ ನೆಲೆಯಾಗಿದ್ದಳು ಮತ್ತು ಶ್ರೀ ಕ್ಷೇತ್ರದಲ್ಲಿ ವನದುರ್ಗೆಯು ಈಗಲೂ ಮೂಲಸ್ಥಾನದಲ್ಲ ಆರಾಧಿಸಲ್ಪಡುತ್ತಿದ್ದಾಳೆ. ನಂತರ ಜೈನ ಅರಸರ ಕಾಲದಿಂದ ಶ್ರೀ ದುರ್ಗಾಪರಮೇಶ್ವರೀ ರೂಪದಲ್ಲಿ ಪೂಜೆಗೊಳ್ಳುತ್ತಿದ್ದಾಳೆ ಎಂದು ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದುಬಂದ ವಿಚಾರವಾಗಿದೆ.

ಶಂಖ, ಚಕ್ರ, ಗಧಾ, ಪದ್ಮ ಧರಿಸಿದ ಆಕರ್ಷಣೀಯ ರೂಪದಲ್ಲಿ ಕಣ್ಮನ ಸೆಳೆಯುವ ಶ್ರೀ ದುರ್ಗೆಯ ಪಾವನ ನೆಲೆಯಾಗಿರುವ ಶ್ರೀ ಕ್ಷೇತ್ರವು ಊರಪರವೂರ ಅಪಾರ ಭಕ್ತಾದಿಗಳ ಸಂಕಷ್ಟಗಳನ್ನು ಪರಿಹರಿಸಿ ಇಷ್ಠಾರ್ಥಗಳನ್ನು ಸಿದ್ಧಿಸುವ ಕಾರಣೀಕ ಕ್ಷೇತ್ರವಾಗಿ ಕಂಗೊಳಿಸುತ್ತಿದೆ. ತಾಯಿ ದುರ್ಗೆಯೊಂದಿಗೆ ಶ್ರೀ ಗಣಪತಿ, ಶ್ರೀ ಶಾಸ್ತಾರ, ಕೊಡಮಣಿತ್ತಾಯಿ, ಪಿಲಿಚಾಮುಂಡಿ, ಕಲ್ಕುಡ, ಕಲ್ಲುರ್ಟಿ ಸಹಿತ ಸನಿಹದಲ್ಲೇ ನಾಗದೇವರ ಸಾನಿಧ್ಯವಿದೆ.

ಕ್ಷೇತ್ರದಲ್ಲಿ ನಿತ್ಯ ತ್ರಿಕಾಲ ಪೂಜೆಯೊಂದಿಗೆ ವರ್ಷಾವಧಿ ಐದು ದಿನಗಳ ಜಾತ್ರಾ ಮಹೋತ್ಸವ, ಬ್ರಹ್ಮರಥೋತ್ಸವ, ದೈವಗಳಿಗೆ ನೇಮೋತ್ಸವ, ನವರಾತ್ರಿ ಉತ್ಸವ, ಸಂಕ್ರಮಣ ಪೂಜೆ, ತೆನೆಹಬ್ಬ ಮೊದಲಾದ ಧಾರ್ಮಿಕ-ವೈಧಿಕ ಸತ್ಕಾರ್ಯಗಳು ಅರ್ಥಪೂರ್ಣವಾಗಿ ಸಂಪನ್ನಗೊಳ್ಳುತ್ತಿದ್ದು ಊರಪರವೂರ ಅಪಾರ ಭಕ್ತಾಧಿಗಳು ಈ ಸಾನಿಧ್ಯಕ್ಕೆ ಚಿತ್ತೈಸಿ ಸರ್ವರೀತಿಯ ಸಹಕಾರ ನೀಡುತ್ತಾ ತಾಯಿಯ ಮುಂದೆ ಪ್ರಾರ್ಥಿಸಿಕೊಂಡು ತಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿಕೊಳ್ಳುತ್ತಿದ್ದಾರೆ.

ಕ್ಷೇತ್ರದ ವಿಶೇಷತೆ:

ಇಪ್ಪತ್ತೇಳು ಅಡಿ ಚಚ್ಚೌಕದ ತೀರ್ಥಮಂಟಪವಿರುವ ದ.ಕ.ಜಿಲ್ಲೆಯ ಏಕೈಕ ದೇವಸ್ಥಾನವೆಂಬ ಹಿರಿಮೆ ಶ್ರೀ ಕ್ಷೇತ್ರದ್ದು. ಆಟಿ ಅಮಾವಾಸ್ಯೆಯಂದು ಶ್ರೀವನದುರ್ಗೆಗೆ ಕಾಡುಕೇಪುಳ ಹೂವನ್ನು ಸಮರ್ಪಿಸಿ ಪ್ರಾರ್ಥಿಸಿದ್ದಲ್ಲಿ ಭಕ್ತರ ಅಭೀಷ್ಠೆಗಳು ನೆರವೇರುತ್ತದೆ ಎನ್ನುವುದು ಭಕ್ತಾದಿಗಳ ಬಲವಾದ ನಂಬಿಕೆ. ಶುಕ್ರವಾರ ಪೂಜೆ ನೆರವೇರಿಸಿದ್ದಲ್ಲಿ ವಿವಾಹಯೋಗ, ವಿದ್ಯೆ-ಉದ್ಯೋಗದಲ್ಲಿ ಯಶಸ್ಸು, ಸಂತಾನ ಭಾಗ್ಯ, ಆರೋಗ್ಯ ಭಾಗ್ಯ ಪ್ರಾಪ್ತವಾಗುವ ಪುಣ್ಯಕ್ಷೇತ್ರವಿದು.

ಇದೀಗ ಕ್ಷೇತ್ರದಲ್ಲಿ ನಡೆದಿರುವ ಅಷ್ಟಮಂಗಳ ಪ್ರಶ್ನೆಯಲ್ಲಿ ಶ್ರೀ ಕ್ಷೇತ್ರದ ಇತಿಹಾಸ ಕಂಡು ಬಂದಿದ್ದು, ಶ್ರೀ ಕ್ಷೇತ್ರವು ಅತ್ಯಂತ ಪುರಾತನವಾದ ಕಾರಣೀಕ ಕ್ಷೇತ್ರವಾಗಿದ್ದು ಶಿಥಿಲಾವಸ್ಥೆಯಲ್ಲಿರುವ ಈ ಕ್ಷೇತ್ರವನ್ನು ಸಕಲ ದಾರ್ಮಿಕ ವಿಧಿವಿದಾನಗಳೊಂದಿಗೆ ಪುನರ್‌ನಿರ್ಮಿಸಿ ಪ್ರತಿಷ್ಠೆ, ಬ್ರಹ್ಮಕಲಶಾಧಿಗಳನ್ನು ನಡೆಸಿ, ವಿಧಿವತ್ತಾಗಿ ಪೂಜೆ, ಉತ್ಸವಾದಿಗಳನ್ನು ನಡೆಸಿಕೊಂಡು ಬಂದಲ್ಲಿ ಊರಿಗೆ ಕ್ಷೇಮವಾಗುವುದಲ್ಲದೆ ಊರಪರವೂರ ಭಕ್ತಾದಿಗಳ ಸಂಕಷ್ಟಾದಿಗಳು ಪರಿಹಾರಗೊಂಡು ಸಕಲ ಸೌಭಾಗ್ಯಗಳು ಕೂಡಿಬರುವುದೆಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಊರಪರವೂರ ಭಕ್ತಜನತೆ ಸೇರಿ ಕ್ಷೇತ್ರದ ಪುನರ್‌ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಇದಕ್ಕೆ ೨ಕೋಟಿ ರೂಪಾಯಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ. ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನಾ ಸಮಿತಿ, ಕ್ಷೇತ್ರದ ಬೆಂಗಳೂರು ಮತ್ತು ಮುಂಬೈ ಸಮಿತಿ ಹಾಗೂ ಊರಪರವೂರ ಭಕ್ತವೃಂದ ದೇವಸ್ಥಾನದ ಅಭಿವೃದ್ಧಿ ಕಾರ್‍ಯದಲ್ಲಿ ಈಗಾಗಲೇ ತೊಡಗಿಸಿಕೊಂಡಿದೆ. ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಈ ಕ್ಷೇತ್ರದ ಅಭಿವೃದ್ಧಿ ಕಾರ್‍ಯಗಳು ಯಶಸ್ವಿಯಾಗಿ ನಡೆದು ತಾಯಿ ದುರ್ಗಾಪರಮೇಶ್ವರೀಯ ಈ ಪುಣ್ಯ ನೆಲೆ ಸರ್ವಾಂಗ ಸುಂದರವಾಗಿ ಕಂಗೊಳಿಸುವರೇ ಭಕ್ತಾದಿಗಳ ತನುಮನಧನಗಳ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸಲಾಗಿದೆ.

ವಿಶೇಷ ಸೂಚನೆಗಳು:

ಕ್ಷೇತ್ರಕ್ಕೆ ಧನಸಹಾಯ ನೀಡುವವರು ಕೆನರಾ ಬ್ಯಾಂಕ್ ವಾಮದಪದವು ಶಾಖೆಯಲ್ಲಿರುವ ಜೀರ್ಣೋದ್ಧಾರ ಸಮಿತಿ, ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅಜ್ಜಿಬೆಟ್ಟು ಖಾತೆ ನಂಬ್ರ 1549101062780(ಐಎಫ್‌ಎಸ್‌ಸಿ ಕೋಡ್: ಸಿಎನ್‌ಆರ್‌ಬಿ0001549)ಗೆ ಪಾವತಿಸಬಹುದಾಗಿದೆ.

ಕ್ಷೇತ್ರದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ೯೪೮೦೨೩೦೪೯೦, ಪ್ರಧಾನ ಕಾರ್‍ಯದರ್ಶಿ ಯೋಗೀಶ್ ಸಾಲ್ಯಾನ್ ಕಳಸಡ್ಕ ೯೪೮೦೧೭೪೬೭೦, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು ೦೪೪೯೭೨೭೩೨೪, ಮುಂಬೈ ಸಮಿತಿ ಅಧ್ಯಕ್ಷ ಅಶೋಕ ಪಕ್ಕಳ ೯೩೨೩೮೨೨೩೫೨, ಕ್ಷೇತ್ರದ ಬೆಂಗಳೂರು ಸಮಿತಿ ಅಧ್ಯಕ್ಷ ಮೋಹನದಾಸ್ ಶೆಟ್ಟಿ ೯೯೪೫೫೫೦೧೨೯, ಸಂಚಾಲಕ ಪ್ರಭಾಕರ ಶೆಟ್ಟಿ ವಾಮದಪದವು ೯೯೮೦೫೮೫೬೨೦ ಇವರನ್ನು ಸಂಪರ್ಕಿಸಬಹುದಾಗಿದೆ.

ವರ್ಷಾವಧಿ ಜಾತ್ರಾ ಮಹೋತ್ಸವ:

ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವವು ಫೆ.೨೦ರಿಂದ ಫೆ.೨೫ರವರೆಗೆ ನಡೆಯಲಿದೆ. ಫೆ.20. 21, 22ರಂದು ನಿತ್ಯ ಉತ್ಸವಾದಿಗಳು, ಫೆ.23ರಂದು ಬೆಳಿಗ್ಗೆ ಮಹಾಚಂಡಿಕಾಯಾಗ, ದರ್ಶನ ಬಲಿ, ಬಟ್ಟಲು ಕಾಣಿಕೆ, ಫೆ.24ರಂದು ಬೆಳಿಗ್ಗೆ ಮಹಾಚಂಡಿಕಾಯಾಗ, ಸಂಜೆ ಧಾರ್ಮಿಕ ಸಭೆ, ರಾತ್ರಿ ಯಕ್ಷಗಾನ ಬಯಲಾಟ, ದೈವಗಳ ನೇಮೋತ್ಸವ, ಮಹಾರಥೋತ್ಸವ ನಡೆಯಲಿದೆ. ಪ್ರತೀ ದಿನ ಅನ್ನಸಂತರ್ಪಣೆ, ಭಜನಾ ಕಾರ್‍ಯಕ್ರಮ, ವಿವಿಧ ವೈಧಿಕ ಧಾರ್ಮಿಕ ಕಾರ್‍ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳಲಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts