ಯಕ್ಷಗಾನ

ಬೊಂಡಾಲ ಪ್ರಶಸ್ತಿ ಪಡೆಯಲಿರುವ ಪಡ್ರೆ ಕುಮಾರ, ನಗ್ರಿ ಮಹಾಬಲ ರೈ

  • ಲೇಖನ: ಭಾಸ್ಕರ ರೈ ಕುಕ್ಕುವಳ್ಳಿ

 ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ  

 ಹಿರಿತಲೆಮಾರಿನ ನುರಿತ ಅರ್ಥಧಾರಿ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಅವರದೇ ದಾರಿಯಲ್ಲಿ ಅರ್ಥಗಾರಿಕೆಯಲ್ಲಿ ಮೆರೆದ ಅವರ ಪುತ್ರ ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ಬೊಂಡಾಲ ಪ್ರಶಸ್ತಿ ದ್ವಯಗಳನ್ನು ನೀಡಲಾಗುತ್ತಿದೆ. ಫೆ.15ಕ್ಕೆ ಕಾರ್ಯಕ್ರಮ. ಫೆ.14 ಮತ್ತು 15ರಂದು ಬಂಟ್ವಾಳ ತಾಲೂಕಿನ ನರಿಕೊಂಬು ಸಮೀಪ ಬೊಂಡಾಲ ಎಂಬಲ್ಲಿ ನಡೆಯಲಿದೆ ಕಾರ್ಯಕ್ರಮ. ಎರಡೂ ದಿನಗಳು ಕಟೀಲು ಮೇಳದಿಂದ ಯಕ್ಷಗಾನ ಪ್ರದರ್ಶನ. 15ರಂದು ಪ್ರಶಸ್ತಿ ಪ್ರದಾನ. ಪ್ರಶಸ್ತಿ ಹಾಗೂ ಕಲಾವಿದರ ಕುರಿತು ಇಲ್ಲಿದೆ ಭಾಸ್ಕರ ರೈ ಕುಕ್ಕುವಳ್ಳಿ ಅವರ ಲೇಖನ.

ಜಾಹೀರಾತು

ಬೊಂಡಾಲ ಜನಾರ್ದನ ಶೆಟ್ಟರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಊರಿನ ಪಟೇಲರಾಗಿಯೂ ಪ್ರಸಿದ್ಧರು. ಕೆ.ಪಿ. ವೆಂಕಪ್ಪ ಶೆಟ್ಟಿ, ನಾರಾಯಣ ಕಿಲ್ಲೆ, ಪೊಳಲಿ ಶಾಸ್ತ್ರಿಗಳಂತಹ ದಿಗ್ಗಜ ಕಲಾವಿದರೊಂದಿಗೆ ತಾಳಮದ್ದಳೆ ಕೂಟಗಳಲ್ಲಿ ಅರ್ಥ ಹೇಳುತ್ತಿದ್ದ ಅವರು ಸಾತ್ವಿಕ ಪಾತ್ರಗಳಿಗೆ ಹೆಸರಾಗಿದ್ದರು. ಅವರಿಗೆಯಕ್ಷಗಾನದ ಸಂಜಯನೆಂದೇ ಹೆಸರು.

ಜನಾರ್ದನ ಶೆಟ್ಟರ ಪುತ್ರ ಬೊಂಡಾಲ ರಾಮಣ್ಣ ಶೆಟ್ಟರು ಕಂದಾಯ ಇಲಾಖೆಯಲ್ಲಿ ಭೂಮಾಪಕರಾಗಿ ಸೇವೆ ಸಲ್ಲಿಸಿದವರು. ಅವರು ತಾಳಮದ್ದಳೆ ಅರ್ಥದಾರಿಯಲ್ಲದೆ ಹವ್ಯಾಸಿ ವೇಷಧಾರಿಯೂ ಆಗಿದ್ದರು. ಶ್ರೇಷ್ಠ ಸಂಘಟಕರಾಗಿ, ಮಾದರಿ ಕೃಷಿಕರಾಗಿ ಜನಪ್ರಿಯತೆ ಗಳಿಸಿದ್ದರು. ಇಬ್ಬರು ಹಿರಿಯರ ಹೆಸರಿನಲ್ಲಿ ಕೊಡಮಾಡುವಬೊಂಡಾಲ ಪ್ರಶಸ್ತಿಗೆ ಬಾರಿ ಆಯ್ಕೆಯಾದವರು ಕಟೀಲು ಮೇಳದ ಕಲಾವಿದರಾದ ಪಡ್ರೆ ಕುಮಾರ ಮತ್ತು ನಗ್ರಿ ಮಹಾಬಲ ರೈ.

ಪಡ್ರೆ ಕುಮಾರ :

ತೆಂಕುತಿಟ್ಟಿನ ಯಕ್ಷಗುರುವೆಂದೇ ಖ್ಯಾತರಾಗಿದ್ದ ಪಡ್ರೆ ಚಂದು ಹಾಗೂ ಸುಶೀಲ ಯಾನೆ ಭಾಗೀರಥಿ ದಂಪತಿಗೆ 1947ರಲ್ಲಿ ಜನಿಸಿದ್ದ ಪಡ್ರೆ ಕುಮಾರ ಕಲಿತದ್ದು 5ನೇ ತರಗತಿ. ಯಕ್ಷಗಾನದಲ್ಲಿ ಅವರಿಗೆ ತಂದೆಯೇ ಗುರು. ತನ್ನ ಹನ್ನೆರಡನೇ ವಯಸ್ಸಿನಲ್ಲೇ ಅವರು ಮೇಳ ಸೇರಿದರು. ಇರಾ ಗೋಪಾಲಕೃಷ್ಣ ಭಾಗವತರಿದ್ದ ಕಟೀಲು ಮೇಳದಲ್ಲಿ ಗೆಜ್ಜೆಕಟ್ಟಿ ಕಳೆದ ಐದು ದಶಕಗಳಿಂದ ಒಂದೇ ಮೇಳದಲ್ಲಿ ಸೇವೆ ಸಲ್ಲಿಸಿದ ಖ್ಯಾತಿ ಅವರದು. ನಡುವೆ ಒಂದು ವರ್ಷ ಇರಾ ಸೋಮನಾಥೇಶ್ವರ ಮೇಳದಲ್ಲೂ ಅವರು ತಿರುಗಾಟ ನಡೆಸಿದ್ದಾರೆ.

ಬಡಿಲ ಸಂಕಪ್ಪ ರೈ, ದಿ. ಸೀತಾರಾಮ ಶೆಟ್ಟಿ, ದಿ. ಕಲ್ಲಾಡಿ ಕೊರಗ ಶೆಟ್ಟಿ, ದಿ. ಕಲ್ಲಾಡಿ ವಿಠಲ ಶೆಟ್ಟಿ ಮತ್ತು ಪ್ರಸ್ತುತ ಕಲ್ಲಾಡಿ ದೇವಿ ಪ್ರಸಾದ ಶೆಟ್ಟಿಹೀಗೆ ಐದು ಯಜಮಾನರೊಂದಿಗೆ ಸಾಗಿದ ಅವರ ಯಕ್ಷಯಾನಕ್ಕೆ ಐತಿಹಾಸಿಕ ಮಹತ್ವವಿದೆ. ಬಣ್ಣದ ವೇಷವನ್ನು ಹೊರತುಪಡಿಸಿ, ಮಿಕ್ಕೆಲ್ಲ ಪ್ರಕಾರದ ವೇಷಗಳನ್ನು ಅವರು ಮಾಡಿದ್ದಾರೆ. ಕೋಡಂಗಿ, ನಿತ್ಯವೇಷ, ಸ್ತ್ರೀವೇಷ, ಹಾಸ್ಯ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಪುಂಡುವೇಷ ಮತ್ತು ರಾಜವೇಷಗಳಲ್ಲಿ ಪಡ್ರೆ ಕುಮಾರರಿಗೆ ಅಪಾರ ಜನಪ್ರಿಯತೆ ಲಭಿಸಿದೆ. ಶ್ರೀರಾಮ, ಕೃಷ್ಣ, ದೇವೇಂದ್ರ, ಅರ್ಜುನ, ಹನೂಮಂತ, ಮಧುಕೈಟಭ, ಚಂಡಮುಂಡ, ದಾರುಕ, ನಕ್ಷತ್ರಿಕ, ಜಮದಗ್ನಿ, ಮಾಲಿನಿ, ಸೀತೆ, ಲಕ್ಷ್ಮೀ ಇತ್ಯಾದಿ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕೊರವಂಜಿ ಅವರ ಪ್ರಸಿದ್ಧ ಪಾತ್ರ.

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕಲಾಪ್ರಕಾಶ ಮುಂಬಯಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳಿಂದ ಹಲವಾರು ಪ್ರಶಸ್ತಿಸನ್ಮಾನಗಳನ್ನು ಪಡೆದಿರುವ ಪಡ್ರೆಕುಮಾರ 72 ಇಳಿವಯಸ್ಸಿನಲ್ಲೂ ತನ್ನ ತಿರುಗಾಟ ಮುಂದುವರಿಸಿದ್ದಾರೆ. ಪತ್ನಿ ಸರಸ್ವತಿ ಯಾನೆ ವಿದ್ಯಾ ಹಾಗೂ ಮಕ್ಕಳಾದ ಲಾವಣ್ಯ, ಯೋಗೀಶ್, ವಿನುತಾರೊಂದಿಗೆ ಕಟೀಲಿನ ಕೊಂಡೆಮೂಲ ಜಲಕದಕಟ್ಟೆಯ ಬಳಿ ಮನೆ ಮಾಡಿ ವಾಸಿಸುತ್ತಿದ್ದಾರೆ.

ನಗ್ರಿ ಮಹಾಬಲ ರೈ :

ಶ್ರೀ ದೇವಿ ಮಹಾತ್ಮೆ ಮಹಿಷಾಸುರ ಪಾತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ನಗ್ರಿ ಮಹಾಬಲ ರೈ ಕಳೆದ 29 ವರ್ಷಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಗ್ರಿಗುತ್ತು ನಾರಾಯಣ ರೈ ಮತ್ತು ರಾಜೀವಿ ರೈ ದಂಪತಿಗೆ ನವೆಂಬರ 29, 1959ರಲ್ಲಿ ಜನಿಸಿದ ಅವರು ಬಾಲ್ಯದಿಂದಲೇ ಯಕ್ಷಗಾನದಿಂದ ಆಕರ್ಷಿತರಾದವರು.

ಪುತ್ತೂರು ಶೀನಪ್ಪ ಭಂಡಾರಿಯವರಲ್ಲಿ ನಾಟ್ಯಾಭ್ಯಾಸ ಮಾಡಿ ಹದಿನೈದು ವರ್ಷಗಳ ಕಾಲ ಸುಬ್ರಹ್ಮಣ್ಯ ಮೇಳದಲ್ಲಿ ತಿರುಗಾಟ ನಡೆಸಿ ಮುಂದೆ ಒಂದು ವರ್ಷ ಧರ್ಮಸ್ಥಳ ಮೇಳದಲ್ಲೂ ಸೇವೆ ಸಲ್ಲಿಸಿದ್ದಾರೆ. ಮೇಲೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯನ್ನು ಸೇರಿಕೊಂಡ ಅವರು ಮತ್ತೆ ತಿರುಗಿ ನೋಡಲಿಲ್ಲ. ನಾಲ್ಕೂವರೆ ದಶಕಗಳ ಅವರ ಯಕ್ಷಗಾನ ಸೇವೆಯಲ್ಲಿ ಬಣ್ಣದ ವೇಷದ್ದೇ ಸಿಂಹಪಾಲು. ಕುರಿಯ ಗಣಪತಿ ಶಾಸ್ತ್ರಿ ಮತ್ತು ದಿ. ಗೇರುಕಟ್ಟೆ ಗಂಗಯ್ಯ ಶೆಟ್ಟರ ನಿರ್ದೇಶನದಲ್ಲಿ ಅವರು ಮಾಡುತ್ತಿರುವಮಹಿಷಾಸುರಪಾತ್ರದ ಆವೇಶಅಬ್ಬರ ಕಲಾಭಿಮಾನಿಗಳ ಮನಗೆದ್ದಿದೆ.

ರಂಗದ ಒಳಗೂ, ಹೊರಗೂ ಸೌಜನ್ಯಯುಕ್ತ ನಡೆನುಡಿಗಳಿಂದ ಎಲ್ಲರಿಗೂ ಪ್ರೀತಿಪಾತ್ರರಾಗಿರುವ ಮಹಾಬಲ ರೈ ಹಲವು ಕಡೆ ಸನ್ಮಾನಿತರಾಗಿದ್ದಾರೆ. ಪತ್ನಿ ಸುಗುಣ ರೈ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯೊಂದಿಗೆ ಜೀವಿಸುತ್ತಿರುವ ಅವರದು ಸಂತೃಪ್ತ ಕುಟುಂಬ.

ಕಟೀಲು ಮೇಳದಲ್ಲಿ ಸೇವೆಗೈದ ಕಲಾವಿದರಿಗಾಗಿಯೇ ಕಳೆದ ಎಂಟು ವರ್ಷಗಳಿಂದ ನೀಡಲಾಗುತ್ತಿರುವಬೊಂಡಾಲ ಪ್ರಶಸ್ತಿಯನ್ನು ಇದೇ ಫೆಬ್ರವರಿ 15ರಂದು ಇಬ್ಬರು ಹಿರಿಯ ಕಲಾವಿದರು ಪಡೆಯುತ್ತಿದ್ದಾರೆ. ಬಂಟ್ವಾಳ ತಾಲೂಕು ಶಂಭೂರಿನ ಬೊಂಡಾಲದಲ್ಲಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರ ನೇತೃತ್ವದಲ್ಲಿ ಜರಗುವ ಕಟೀಲು ಮೇಳದ ಬಯಲಾಟದ ರಂಗಸ್ಥಳದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ.

  • ಭಾಸ್ಕರ ರೈ ಕುಕ್ಕುವಳ್ಳಿ ವಿದ್ಯಾಕದ್ರಿಕಂಬಳ ರಸ್ತೆ, ಬಿಜೈ, ಮಂಗಳೂರು575004
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.