ಕವರ್ ಸ್ಟೋರಿ

ನಡೆಯಲೂ ಕಷ್ಟ, ನಿಲ್ಲುವುದೂ ಕಷ್ಟ, ಬಂಟ್ವಾಳ ಬಿ.ಸಿ.ರೋಡಿನಲ್ಲಿ ಮುಗಿಯದ ಸಂಕಷ್ಟ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಮಂಗಳೂರಿಗೆ ತೆರಳುವವರು ನಿಲ್ಲುವ ಜಾಗದಲ್ಲಿ ಸ್ಲ್ಯಾಬ್ ಕದಲಿದೆ. ರಾತ್ರಿ ಹೊತ್ತು ಹೇಗೂ ಕಷ್ಟ. ಹಗಲೂ ಡೇಂಜರ್. ಇದು ಬಿ.ಸಿ.ರೋಡಿನ ತಾಜಾ ಚಿತ್ರಣ.

  • Harish Mambady

2016… ಬಂಟ್ವಾಳನ್ಯೂಸ್ ವೆಬ್ ಪತ್ರಿಕೆ ಆರಂಭಗೊಂಡ ಸಂದರ್ಭ. ಬಂಟ್ವಾಳ ಪುರಸಭೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಮಟ್ಟದ ದೊಡ್ಡ ಸಭೆಯೊಂದು ನಡೆದಿತ್ತು. ಅಂದು ಜಿಲ್ಲಾಧಿಕಾರಿಯಾಗಿದ್ದವರು ಜಗದೀಶ್. ಆ ಸಂದರ್ಭ ಐಎಎಸ್ ಅಧಿಕಾರಿ ಗಾರ್ಗಿ ಜೈನ್ ಎಂಬವರನ್ನು ಪುರಸಭೆಗೆ ಸಂಬಂಧಿಸಿ ಪ್ರಗತಿಯ ಕುರಿತು ಅವರು ನೇಮಿಸಿ, ಇಡೀ ಬಂಟ್ವಾಳ, ಬಿ.ಸಿ.ರೋಡಿನ ಚಿತ್ರಣವನ್ನು ಬದಲಾಯಿಸುವ ಕುರಿತು ಪ್ಲಾನ್ ಹಾಕಲಾಗಿತ್ತು. ಆಗ ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿತ್ತು. ಬಿ.ಸಿ.ರೋಡಿನ ರಸ್ತೆಯನ್ನು ಬಳಸಿಕೊಂಡೇ ಸೈರನ್ ಹಾಕಿದ ವಿವಿಐಪಿ, ವಿಐಪಿಗಳ ವಾಹನಗಳು ಸಾಗುತ್ತಿದ್ದವು. ಈಗಲೂ ಈ ಮಾರ್ಗದಲ್ಲೇ ಮಂಗಳೂರಿಂದ ಸೈರನ್ ಮೊಳಗಿಸುವ ವಾಹನಗಳು ಸಾಗುತ್ತವೆ. ಆದರೆ ಉಹುಂ….,

2016ರ ನವೆಂಬರ್ ತಿಂಗಳಲ್ಲಿ ಡಿಸಿ, ಆಡಳಿತಾಧಿಕಾರಿ, ಪುರಸಭಾಧ್ಯಕ್ಷ, ಶಾಸಕ ಹೀಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಬದಲಾದರು, ಬಂಟ್ವಾಳ, ಬಿ.ಸಿ.ರೋಡ್ ಬದಲಾಗಲೇ ಇಲ್ಲ. ಇಂದಿಗೂ ಬಂಟ್ವಾಳ ಪೇಟೆಗೆ ದ್ವಿಚಕ್ರ ವಾಹನ ತೆಗೆದುಕೊಂಡು ಹೋದರೂ ಪಾರ್ಕಿಂಗ್ ಎಲ್ಲಿ ಮಾಡೋದು ಎಂದು ತಲೆಕೆಡಿಸಬೇಕು. ಬಿ.ಸಿ.ರೋಡ್ ಅಂತೂ ಕೇಳೋದೇ ಬೇಡ. ದೊಡ್ಡ ಕಟ್ಟಡಗಳು ತಲೆ ಎತ್ತಿದವೇ ವಿನಃ  ಭಾರೀ ಬದಲಾವಣೆ ಆಗಲೇ ಇಲ್ಲ.

ಹೇಗಿದೆಯೋ ಹಾಗೇ ಇದೆ. ಬಿ.ಸಿ.ರೋಡ್. 2016 ನವೆಂಬರ್ ಕಳೆದು 2017 ನವೆಂಬರ್ ಬಂತು. 2017ರ ನವೆಂಬರ್ ಕಳೆದು, 2018ರ ನವೆಂಬರ್ ಬಂತು. ಕ್ಯಾಲೆಂಡರ್ ಹಾಳೆಗಳು ಪಟಪಟನೆ ಮಗುಚಿದವು. ಫ್ಲೈಓವರ್ ಅಡಿ ಒಬ್ಬ ತರಕಾರಿ ಮಾಡುವವನಿದ್ದರೆ, ಈಗ ಹತ್ತಾರು ಮಂದಿ ಕೊತ್ತಂಬರಿ ಸೊಪ್ಪು, ಟೊಮೆಟೊ ಮಾರುತ್ತಿದ್ದಾರೆ. ಪಾಪ, ಆತ ಮಾರಲಿ ಎಂದುಕೊಂಡರೆ, ಅದನ್ನು ಕೊಳ್ಳಲು ಬರುವಾತ ಅಲ್ಲೇ ಕಾರು, ಬೈಕು ನಿಲ್ಲಿಸಿ ಖರೀದಿಸುತ್ತಾನೆ. ಇವರ ಮಧ್ಯೆ ಫ್ಲೈ ಓವರ್ ಅಡಿಯಿಂದ ಮಾರ್ಗ ದಾಟಿ ಧರ್ಮಸ್ಥಳ, ಪುತ್ತೂರು ಬಸ್ ಹತ್ತಬೇಕು ಎಂದಿದ್ದರೆ ಎಡ, ಬಲಗಳನ್ನು ಒಮ್ಮೆ ನೋಡಿದರೆ ಸಾಕಾಗುವುದಿಲ್ಲ. ಯಾವ ಕ್ಷಣದಲ್ಲೂ ಅಪಾಯ. ಹಾಗೆಯೇ ಬಂಟ್ವಾಳ, ಬಿ.ಸಿ.ರೋಡುಗಳಲ್ಲಿ ಅಂಗಡಿ, ಮುಂಗಟ್ಟುಗಳಿಗೆ ಖರೀದಿಗೆ ಎಂದು ದ್ವಿಚಕ್ರ ವಾಹನಗಳಲ್ಲಿ ಬರುವವರು ಅಲ್ಲೇ ರಸ್ತೆಯಲ್ಲಿ ನಿಲ್ಲಿಸಬೇಕು.

ಸರ್ವೀಸ್ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ನೀವೇನಾದರೂ ಹೋಗುತ್ತೀರಿ ಎಂದು ಹಠ ಹಿಡಿದರೆ ಒಂದು ಬದಿಯಿಂದ ಇನ್ನೊಂದು ಬದಿಗೆ ಸೇಫ್ ಆಗಿ ಮರಳಿದರೆ ಬಚಾವ್. ಬಸ್ಸುಗಳೂ ಸರ್ವೀಸ್ ರಸ್ತೆಯಲ್ಲೇ ಬರಬೇಕು, ಅಲ್ಲೇ ಮಂಗಳೂರಿಗೆ ತೆರಳುವ ಬಸ್ಸುಗಳಿಗೆ ನಿಲ್ದಾಣ. ಪ್ರಯಾಣಿಕರಂತೂ ಎಡ, ಬಲವಷ್ಟೇ ಅಲ್ಲ, ಕೆಳಗೂ ನೋಡಬೇಕು. ಏಕೆಂದರೆ ಯಾವಾಗ, ಯಾವ ಹೊತ್ತಿಗೆ ಯಾವ ವಿಷಘಳಿಗೆಯಲ್ಲಿ ಸ್ಲ್ಯಾಬ್ ಗಳನ್ನು ತೆರೆಯಲಾಗುತ್ತದೆ ಎಂಬುದನ್ನು ಸಾಕ್ಷಾತ್ ದೇವರು ಬಂದರೂ ಹೇಳಲು ಸಾಧ್ಯವಿಲ್ಲ. ರಾತ್ರಿ ಕರೆಂಟು ಹೋದರಂತೂ ಯಮಯಾತನೆ. ಬಿ.ಸಿ.ರೋಡ್, ಬಂಟ್ವಾಳದ ಯಾವುದೇ ರಸ್ತೆಗಳಲ್ಲೂ ನಡೆದುಕೊಂಡು ಹೋಗುವವರಿಗೆ ಸುರಕ್ಷತೆ ಇಲ್ಲ. ನಿಮಗೆ ನೆನಪಿರಬೇಕು. ಒಂದೆರಡು ವರ್ಷಗಳ ಹಿಂದೆ ಸರ್ವೀಸ್ ರಸ್ತೆ ದಾಟುವಾಗ ವ್ಯಕ್ತಿಯೊಬ್ಬರು ಘನ ವಾಹನ ಡಿಕ್ಕಿ ಹೊಡೆದು, ಗಾಯಗೊಂಡು ಮೃತಪಟ್ಟಿದ್ದರು. ಬಂಟ್ವಾಳ ಬಿ.ಸಿ.ರೋಡ್ ನಲ್ಲಿ ಫುಟ್ ಪಾತ್ ಇಲ್ಲ ಎಂಬುದು ಸಣ್ಣ ವಿಷಯವೇನಲ್ಲ. ಆದರೆ ಈಗ ಏನಾಗಿದೆ ಎಂದರೆ ಇದೇನೂ ದೊಡ್ಡ ವಿಷಯವಲ್ಲ ಎಂದು ಮಂಗಳೂರು ಬೆಂಗಳೂರನ್ನು ಬೆಟ್ಟು ಮಾಡುತ್ತಾರೆ.

ಆದರೆ ಬಂಟ್ವಾಳ, ಬಿ.ಸಿ.ರೋಡ್ ಅನ್ನು ಇಡೀ ರಾಜ್ಯಕ್ಕೆ ಮಾದರಿ ಎನಿಸುವಂತೆ ಮಾಡಲು ಏಕೆ ಸಾಧ್ಯವಿಲ್ಲ? ಇದಕ್ಕೆಲ್ಲ ಕಾಲ ಕೂಡಿ ಬರಬೇಕು. ಅಲ್ಲಿಯವರೆಗೆ…

Pls click this report which was published on 2016.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts