ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ವಿಡಿಯೋಗಾಗಿ ಕ್ಲಿಕ್ ಮಾಡಿರಿ:
ಒಡಿಯೂರು ವರದಿ: ತುಳುವರು ಒಟ್ಟಾದಾಗ ಮಾತ್ರ ತುಳುವರ ಶಕ್ತಿಯ ವಿಶ್ವರೂಪ ದರ್ಶನವಾಗಲು ಸಾಧ್ಯ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು.
ಶುಕ್ರವಾರ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಫೆ.14 ಮತ್ತು 15 ರಂದು ನಡೆಯಲಿರುವ ತುಳು ಸಾಹಿತ್ಯ ಸಮ್ಮೇಳನ ಮತ್ತು ತುಳುನಾಡ್ದ ಜಾತ್ರೆ– ಒಡಿಯೂರು ರಥೋತ್ಸವದ ರೂಪುರೇಷೆಯ ಬಗ್ಗೆ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು. ಫೆ.14ರಂದು ಸಂಶೋಧಕಿ, ಸಾಹಿತಿ ಡಾ. ಇಂದಿರಾ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಡೆಯುವ ’ತುಳು ಬದ್ಕ್ದ ನಿಲೆ–ಬಿಲೆ ವಿಚಾರದ ಅಡಿಯಲ್ಲಿ ತುಳು ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದಲ್ಲಿ ಪುರಾತನ ತುಳು, ನಡುಗಾಲದ ತುಳು, ಆಧುನಿಕ ತುಳು ಭಾಷೆ ಬೆಳೆದು ಬಂದ ಬಗ್ಗೆ ವಿಮರ್ಶೆ ನಡೆಯಲಿದೆ. ಇದೇ ಸಂದರ್ಭದಲ್ಲಿ ತುಳು ಭಾಷಾಭಿಮಾನಿಗಳಿಗೆ ಪೂರಕವಾಗಿ ’ಅದೃಷ್ಟ ತುಳುವೆ ಬಂಗಾರ್ ಪೆಜುವೆ’ ಎಂಬ ಕಾರ್ಯಕ್ರಮ ವಿಶೇಷವಾಗಿ ನಡೆಯಲಿದೆ. ಫೆ.15ರಂದು ಎರಡು ಗ್ರಾಮಗಳನ್ನು ಸಂಧಿಸುವ ವಿಶಿಷ್ಟ ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು.
ತುಳು ಸಮ್ಮೇಳನದ ಸಂಚಾಲಕ ಡಾ. ವಸಂತಕುಮಾರ್ ಪೆರ್ಲ ಸಮ್ಮೇಳನದಲ್ಲಿ ನಡೆಯುವ ನಾನಾ ಗೋಷ್ಠಿಗಳ ಬಗ್ಗೆ ವಿವರಣೆ ನೀಡಿದರು. ಈ ಸಂದರ್ಭ ಒಡಿಯೂರು ತುಳು ಕೂಟದ ಸ್ಥಾಪಕ ಅಧ್ಯಕ್ಷ ಮಲಾರ್ ಜಯರಾಮ ರೈ, ಸ್ವಾಗತ ಸಮಿತಿಯ ಸಂಚಾಲಕ ವಾಸುದೇವ ಆರ್. ಕೊಟ್ಟಾರಿ, ಹೊರೆ ಕಾಣಿಕೆ ಸಮಿತಿ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಅನಂತಾಡಿ, ಸ್ವಯಂಸೇವಕ ಸಮಿತಿ ಸಂಚಾಲಕ ಸದಾಶಿವ ಅಳಿಕೆ ಮಾತನಾಡಿ, ತುಳುನಾಡ ಜಾತ್ರೆ, ರಥೋತ್ಸವದ ಸಿದ್ಧತೆಗಳ ಮಾಹಿತಿ ನೀಡಿದರು. ಆರ್ಥಿಕ ಸಮಿತಿ ಸಂಚಾಲಕ ಎ. ಸುರೇಶ್ ರೈ, ಶ್ರೀಗುರುದೇವ ವಿದ್ಯಾ ಸಂಸ್ಥೆಗಳ ಸಂಚಾಲಕ ಗಣಪತಿ ಭಟ್ ಸೇರಾಜೆ, ಒಡಿಯೂರು ಶ್ರೀವಜ್ರಮಾತಾ ಮಹಿಳಾ ಸೇವಾ ಸಮಿತಿ ಅಧ್ಯಕ್ಷ ಸರ್ವಾಣಿ ಪಿ. ಶೆಟ್ಟಿ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು ಉಪಸ್ಥಿತರಿದ್ದರು. ಪ್ರಚಾರ ಸಮಿತಿ ಸಂಚಾಲಕ ಅಜಿತ್ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸ್ವಯಂಸೇವಕ ಸಮಿತಿ ಸಂಚಾಲಕ ಸದಾಶಿವ ಅಳಿಕೆ ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.