ಬಂಟ್ವಾಳ

ಪ್ರಧಾನಿ ಆಶಯ ತಲುಪಿಸುವ ಕಾರ್ಯ ನಡೆಯಲಿ: ರಾಜೇಶ್ ನಾಯ್ಕ್

ಪ್ರಧಾನಿ ನರೇಂದ್ರ ಮೋದಿಜಿಯವರು ಉತ್ತಮವಾದ, ಜನಪರವಾದ ಬಜೆಟ್ ಮಂಡಿಸಿದ್ದಾರೆ. ಈ ಯೋಜನೆಗಳು ಜನರಿಗೆ ತಲುಪುವಲ್ಲಿ ಕಾರ್ಯಕರ್ತರ ಶ್ರಮ ಅತ್ಯಗತ್ಯ. ಹಾಗಾಗೀ ದೇಶದ ಅಭಿವೃದ್ಧಿ ದೃಷ್ಟಿಯಿಂದ ಮೊದಲು ಗ್ರಾಮದ ಅಭಿವೃದ್ಧಿ ಯಾಗಬೇಕು. ಪ್ರತಿ ಮನೆಮನೆಗಳಿಗೂ ಯೋಜನೆಗಳು ತಲುಪುವ ದೃಷ್ಟಿಯಿಂದ ನಾವು ಕೆಲಸ ಮಾಡಬೇಕಾಗಿ ಬಂಟ್ವಾಳ ಶಾಸಕ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್ ಕರೆ ನೀಡಿದರು.

ಕಳ್ಳಿಗೆ ಗ್ರಾಮದ ಪನ್ನಡ್ಕ ಪರಿಸರದಲ್ಲಿ ನೂತನ ಕೊಳವೆಬಾವಿ ಸಂಪರ್ಕ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಕಳ್ಳಿಗೆ ಗ್ರಾಮದಲ್ಲಿ ಸುಮಾರು 300ಕ್ಕೂ ಅಧಿಕ ಮನೆಗಳಿಗೆ ಆಯುಷ್ಮಾನ್ ಯೋಜನೆಯ ಅನುಮೋದನೆ ಪತ್ರ ತಲುಪಿರುತ್ತದೆ. ಮುಂದಿನ ದಿನಗಳಲ್ಲಿ ಉಳಿದ ಫಲಾನುಭವಿಗಳಿಗೂ ಪತ್ರ ಅಂಚೆ ಕಚೇರಿ ಮೂಲಕ ತಲುಪಲಿದೆ. ಈ ಪತ್ರದ ಜೊತೆಗೆ ರೇಶನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಪ್ರತಿಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕೊಂಡುಹೋಗಿ ಅಲ್ಲಿ ಆಯುಷ್ಮಾನ್ ಭಾರತ ಯೋಜನೆಯ ಕಾರ್ಡ್ ಪಡೆದರೆ ಮಾತ್ರ ಬಿಪಿಎಲ್ ಕಾರ್ಡ್ ದಾರರಿಗೆ ಸಂಪೂರ್ಣ ಉಚಿತ ಹಾಗೂ ಎಪಿಎಲ್ ಕಾರ್ಡ್ ದಾರರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರಕುವುದು. ಶೀಘ್ರದಲ್ಲೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲೂ ಕಾರ್ಡ್ ವಿತರಣೆಗೆ ಅವಕಾಶ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ ಕ್ರಮಕ್ಕೆ ಸೂಚಿಸಿರುವುದಾಗಿ ಶಾಸಕರು ತಿಳಿಸಿದರು.

ಉಜ್ವಲ ಯೋಜನೆಯಡಿ ಕಳ್ಳಿಗೆ ಗ್ರಾಮದಲ್ಲಿ ಈಗಾಗಲೇ 35ಕ್ಕೂ ಅಧಿಕ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ವಿತರಣೆಯಾಗಿದೆ. ಉಳಿದ ಫಲಾನುಭವಿಗಳಿಗೆ ಕೆಲವೇ ದಿನಗಳಲ್ಲಿ ಉಜ್ವಲ ಯೋಜನೆ ಕಿಟ್ ವಿತರಣೆಯಾಗಲಿದೆ ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಹಳ್ಳಿಯಲ್ಲಿ ಪ್ರತಿಯೊಂದು ಮನೆಯವರು ಉದ್ಯೋಗ ಕಾರ್ಡ್ ಮಾಡಿಸಬೇಕು. ಈ ಯೋಜನೆಯ ಮೂಲಕ ನಮ್ಮ ಗ್ರಾಮದ ರಸ್ತೆಗಳನ್ನು ನಾವೇ ದುರಸ್ತಿ ಮಾಡಬಹುದು ಎಂದರು. ದೇಶದ ಪ್ರತಿಯೊರ್ವ ನಾಗರಿಕರು ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗಿರುವ ಅತೀ ಕಡಿಮೆ ದರದ ಇನ್ಶೂರೆನ್ಸ್ ಪಾಲಿಸಿಗಳನ್ನು ( 12 ರೂ. ಮತ್ತು 330 ರೂ.ಗಳ) ಕಡ್ಡಾಯವಾಗಿ ಮಾಡಿಸಬೇಕು ಎಂದರು. ಕಳ್ಳಿಗೆ ಗ್ರಾಮದಲ್ಲಿ 175+ ಫಲಾನುಭವಿಗಳು ಸ್ವಂತ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದು, ಇದರ ಬಗ್ಗೆ ಶಾಸಕರು ಕಳ್ಳಿಗೆ ಗ್ರಾಪಂ ಪಿಡಿಓ ಶಿವುಲಾಲ್ ಚವಾಣ್ ರವರ ಬಳಿ ಮಾಹಿತಿ ಪಡೆದು, ಶೀಘ್ರವೇ ಇದರ ಬಗ್ಗೆ ಕ್ರಮ ಕೈಗೊಂಡು ವರದಿ ನೀಡಬೇಕಾಗಿ ಸೂಚಿಸಿದರು.

ಅಲ್ಲದೆ ಪನ್ನಡ್ಕ ಪರಿಸರದಲ್ಲಿ ಕೆಲವು ಮನೆಗಳಿಗೆ ಸಂಪರ್ಕ ರಸ್ತೆಯ ಕೊರತೆಯಿದ್ದು, ಕೂಡಲೇ ರಸ್ತೆ ಸಂಪರ್ಕ ವ್ಯವಸ್ಥೆ ಮಾಡಿಕೊಡಬೇಕಾಗಿ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಓ ಗ್ರಾಮಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಶೀಘ್ರವೇ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದರು. ಗ್ರಾಮಸ್ಥರು ಹಲವು ಸಮಸ್ಯೆಗಳ ಬಗ್ಗೆ ಶಾಸಕರ ಗಮನಸೆಳೆದರು. ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಶಾಸಕರು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕಳ್ಳಿಗೆ ಗ್ರಾಪಂ ಪಿಡಿಒ ಶಿವುಲಾಲ್ ಚವಾಣ್, ಪಂಚಾಯತ್ ಸದಸ್ಯರಾದ ಯಶೋದಾ ಜಾರಂದಗುಡ್ಡೆ, ರೇವತಿ ಮಾಡಂಗೆ, ಮಾಜಿಸದಸ್ಯರಾದ ದಯಾನಂದ ಜಾರಂದಗುಡ್ಡೆ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಬಿಜೆಪಿ ಸಜಿಪಮುನ್ನೂರು ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಮನೋಹರ ಕಂಜತ್ತೂರು, ಕಳ್ಳಿಗೆ ಬಿಜೆಪಿ ಶಕ್ತಿಕೇಂದ್ರ ಪ್ರ.ಕಾರ್ಯದರ್ಶಿ ನವೀನ್ ಪೆರಿಯೋಡಿಬೀಡು, ಬಿಜೆಪಿ ಮುಖಂಡರಾದ ಮನೋಜ್ ವಳವೂರು, ಪ್ರದೀಪ್ ಶೆಟ್ಟಿ ಬ್ರಹ್ಮರಕೂಟ್ಲು, ರಾಹುಲ್ ಪಚ್ಚಿನಡ್ಕ, ಸುಮಿತ್ ಪಚ್ಚಿನಡ್ಕ, ಯೋಗೀಶ್ ದರಿಬಾಗಿಲು, ವಿಶ್ವನಾಥ ದಾಸರಕೋಡಿ, ನವೀನ್ ಪನ್ನಡ್ಕ,‌ ಅಮ್ಟಾಡಿ ಗ್ರಾಪಂ ಸದಸ್ಯ ಶೇಖರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ