ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮಾಣಿ (ಬಂಟ್ವಾಳ ತಾಲೂಕು): ರಾಸಾಯನಿಕ ಗೊಬ್ಬರದ ಬದಲಾಗಿ ಹಟ್ಟಿಗೊಬ್ಬರ ಬಳಕೆ ಮಾಡಲು ಸರ್ಕಾರ ಪ್ರೋತ್ಸಾಹ ನೀಡುವ ಅಗತ್ಯವಿದೆ. ಇದರಿಂದ ಗೋಸಾಕಣೆ ಹೆಚ್ಚಾಗಿ ಗೋವಿಗೆ ರಕ್ಷಣೆ ಸಿಗಲು ಸಾಧ್ಯವಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಮಾಣಿ ಶ್ರೀ ರಾಮಚಂದ್ರಾಪುರ ಮಠದಲ್ಲಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಭಾರತೀಯ ಗೋಪರಿವಾರ, ಕರ್ನಾಟಕ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಪಂಚಗವ್ಯ ಪ್ರಶಿಕ್ಷಣದ ಸಮಾರೋಪದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಗೋಸಾಕಣೆ ಹಾಲಿಗಾಗಿ ಮೀಸಲಾಗದೆ, ಹಿರಿಯರ ಕಲ್ಪನೆಯಂತೆ ಪರ್ಯಾಯ ವಿಚಾರಗಳಿಗೆ ಬಳಸುವಂತಾಗಬೇಕು. ಗೋಮಯ ಹಾಗೂ ಗೋಮೂತ್ರದಲ್ಲಿ ಲಕ್ಷ್ಮಿಯನ್ನು ಕಾಣುವ ಕಾರ್ಯವಾಗಬೇಕಾಗಿದೆ ಎಂದವರು ಹೇಳಿದರು.
ಹವ್ಯಕ ಮಹಾ ಮಂಡಲ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು ಮಾತನಾಡಿ ಗೋವಿನ ಬಗ್ಗೆ ಗೋಪ್ರೇಮಿಗಳು ಸರ್ಕಾರದ ಮಟ್ಟದಲ್ಲಿ – ವಿಧಾನಸಭೆಯಲ್ಲಿ ಮಾತನಾಡಬೇಕಾಗಿದೆ. ಗೋವನ್ನು ಬಳಸಿಕೊಳ್ಳುವ ವಿಧಾನಗಳನ್ನು ತಿಳಿದು ಮುನ್ನಡೆದಾಗ ಜೀವನದಲ್ಲಿ ಯಶಸ್ವಿ ಲಭಿಸುತ್ತದೆ. ದೇಶೀ ಗೋವಿನ ಆದರ್ಶಗಳನ್ನಿಟ್ಟುಕೊಂಡು ಮುನ್ನಡೆದಾಗ ಗೋವಿನ ರಕ್ಷಣೆ ಸಾಧ್ಯ ಎಂದರು.
18 ಮಂದಿ ಶಿಬಿರಾರ್ಥಿಗಳು ಭಾಗವಹಿಸಿ ಗೌವ್ಯೋತ್ಪನ್ನ ತಯಾರಿಯ ಬಗ್ಗೆ ತರಬೇತಿ ಪಡೆದುಕೊಂಡರು. ಸುಲೋಚನಾ ಎಂ. ಅವರು ತರಬೇತಿ ನೀಡಿದರು. ಪ್ರೇಮ್ ಚಂದ್ರ ಮಂಜೇಶ್ವರ, ಜ್ಯೋತಿ ಪೈ ಉಡುಪಿ ಅನುಭವ ಹಂಚಿಕೊಂಡರು.
ಗೋಪರಿವಾರದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಗೋಪ್ರೇಮಿ ಪದ್ಮನಾಭ ಶೆಟ್ಟಿ, ಮಾತೃ ಗೋಪರಿವಾರದ ರಾಜ್ಯ ಅಧ್ಯಕ್ಷೆ ಕೆ. ಟಿ. ಶೈಲಜಾ ಭಟ್, ಮಾಣಿ ಮಠ ಸೇವಾ ಸಮಿತಿ ಅಧ್ಯಕ್ಷ ಹಾರೆಕರೆ ನಾರಾಯಣ ಭಟ್ ಉಪಸ್ಥಿತರಿದ್ದರು.
ಪಂಚಗವ್ಯ ಪ್ರಶಿಕ್ಷಣ ಸಂಚಾಲಕ ಡಾ. ರವಿ ಪಾಂಡವಪುರ ಸ್ವಾಗತಿಸಿ, ಪ್ರಸ್ತಾವನೆಗೈದರು. ಭಾರತೀಯ ಗೋ ಪರಿವಾರ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ ವಂದಿಸಿದರು. ಶ್ರೀಕಾರ್ಯದರ್ಶಿ ಶಿಶಿರ್ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.