ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಪಿ ಕೃಷ್ಣರಾಜ ಭಟ್ ಕರ್ಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೀರ್ತನಾ ಸಂಗೀತ ಶಾಲೆಯ ಪ್ರಾಚಾರ್ಯ ಕೃಷ್ಣಾಚಾರ್ಯ ಮತ್ತು ರಜತ ಕೃಷ್ಣಾಚಾರ್ಯ ಉಪಸ್ಥಿತರಿದ್ದು ಸ್ವಾಗತಿಸಿದರು. ಹರ್ಷರಾಜ್ ಕಾರ್ಯಕ್ರಮ ನಿರೂಪಿಸಿದರು. ದಿನವಿಡೀ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಪ್ರತಿಭಾ ಪ್ರದರ್ಶನ ನಡೆಯಿತು. ಸಂಜೆ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯನ್ನು ಮೈಸೂರಿನ ವಿದ್ವಾನ್ ಎನ್. ಆರ್ ಪ್ರಶಾಂತ್ ನಡೆಸಿಕೊಟ್ಟರು. ಸುಮಾರು 2 ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮವು ಸಂಗೀತ ಪ್ರೀಯರ ಮನಸೂರೆಗೊಂಡಿತು.
ದಿನಾಂಕ 27 ಭಾನುವಾರ ನಡೆದ ಯಕ್ಷಾರಾಧನೆ ಕಾರ್ಯಕ್ರಮದಲ್ಲಿ ಮಹಮ್ಮಾಯಿ ಕಲಾಕೇಂದ್ರದ ವಿದ್ಯಾರ್ಥಿಗಳು ತಮ್ಮ ಯಕ್ಷಗಾನ ಪ್ರತಿಭಾ ಪ್ರದರ್ಶನ ತೋರ್ಪಡಿಸಿದರು. ನಾಟ್ಯಗುರು ಶ್ರೀವತ್ಸ ಎಸ್. ಆರ್ ಕಾರ್ಕಳ ಇವರ ನಿರ್ದೇಶನದಲ್ಲಿ ಯಕ್ಷಗಾನದ ಶಾಸ್ತ್ರೀಯ ನೆಲೆಗಟ್ಟನ್ನು ಪರಿಚಯಿಸುವ ಪೂರ್ವ ರಂಗ ಪ್ರಸ್ತುತಿಯನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಮೋಹನ್ ರಾವ್ ಕೆ ಮಾತನಾಡುತ್ತಾ ಕಲೆ ಸಾಹಿತ್ಯಗಳು ವ್ಯಕ್ತಿಗೆ ಶೋಭೆಯನ್ನು ತರುವುದರೊಂದಿಗೆ ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣವಾಗಲು ಸಹಕರಿಸುತ್ತವೆ ಎಂದರು. ಈ ಸಂದರ್ಭ ಯಕ್ಷಗಾನದ ಕುರಿತಾಗಿ ಮಕ್ಕಳಲ್ಲಿ ಅರಿವು ಮೂಡಿಸಲು ಶ್ರಮಿಸಿರುವ ನರಿಕೊಂಬು ಹಿ.ಪ್ರಾ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಅವರನ್ನು ಸನ್ಮಾನಿಸಲಾಯಿತು. ನಂತರ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರದ ಮಹಿಳಾ ಘಟಕದ ಸದಸ್ಯೆಯರು ಜಾಂಬವತಿ ಕಲ್ಯಾಣ ಎಂಬ ತಾಳ ಮದ್ದಳೆಯನ್ನು ಪ್ರಸ್ತುತ ಪಡಿಸಿದರು. ಬಳಿಕ ಕಲಾಕೇಂದ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಸಮುದ್ರ ಮಥನ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಉಪನ್ಯಾಸಕ ದಾಮೋದರ ಇ ಕಾರ್ಯಕ್ರಮಗಳನ್ನು ನಿರೂಪಿಸಿದರು. ಕಲಾಕೇಂದ್ರದ ಅಧ್ಯಕ್ಷರಾದ ಪಿ ಕೃಷ್ಣರಾಜ್ ಭಟ್ ಕರ್ಬೆಟ್ಟು ಸ್ವಾಗತಿಸಿದರು. ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರದ ಟ್ರಸ್ಟಿ ವೈದ್ಯರಾದ ಸುಬ್ರಹ್ಮಣ್ಯ ಭಟ್ ವಂದಿಸಿದರು. ಟ್ರಸ್ಟಿನ ಸದಸ್ಯರಾದ ವೆಂಕಟೇಶ್ ಪುತ್ರೋಟಿಬೈಲು, ಯತೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.