www.bantwalnews.com Editor: Harish Mambady
ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರದಲ್ಲಿ ಮಾ.13ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. 10ನೇ ತಾರೀಕಿಗೆ ಪ್ರತಿಷ್ಠಾ ಕಾರ್ಯಗಳು ನೆರವೇರಲಿವೆ. ಮಾ.3ರಿಂದ 13ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಬಂಟ್ವಾಳದಿಂದ 84 ಗ್ರಾಮಗಳ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಮಾ.5ರಂದು ಸಂಜೆ 3.30ಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಸಮೀಪ ಇರುವ ಮೈದಾನದಿಂದ ಹೊರಡಲಿದೆ. ಇದು ಭಾನುವಾರ ಜ.27ರಂದು ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆದ ಸಭೆಯ ಮುಖ್ಯಾಂಶ.
ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾ.3ರಿಂದ 13ರವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಂಟ್ವಾಳದಿಂದ ಹೊರೆಕಾಣಿಕೆ ನಡೆಸುವ ಕುರಿತು ಪೂರ್ವಭಾವಿ ಸಭೆ ಬಿ.ಸಿ.ರೋಡಿನ ರಂಗೋಲಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ ರಾಷ್ಟ್ರದಲ್ಲಿ ಬೃಹತ್ ಗಾತ್ರದ ಮೃಣ್ಮಯ ಮೂರ್ತಿ ಹೊಂದಿರುವ ಏಕೈಕ ಕ್ಷೇತ್ರ ಪೊಳಲಿ. ಈ ಕ್ಷೇತ್ರದ ದೇವರ ಬ್ರಹ್ಮಕಲಶೋತ್ಸವ ನಮ್ಮ ನಿಮ್ಮ ಜೀವಿತದ ಅವಧಿಯಲ್ಲಿ ದೊರೆತಿರುವುದು ಬದುಕಿನ ಸಾರ್ಥಕ್ಯದ ಕ್ಷಣ. ಈ ಪುಣ್ಯ ಕಾರ್ಯ ಯಶಸ್ವಿಗೊಳಿಸುವ ಮಹತ್ತರ ಹೊಣೆ ನಮ್ಮೆಲ್ಲರದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ತಾಲೂಕಿನ ಪ್ರತೀ ಗ್ರಾಮದಲ್ಲಿ ಹೊರೆಕಾಣಿಕೆ ಸಮಿತಿ ರಚಿಸಿ ಮಾ. 5ರಂದು ಸಂಜೆ 3ಗಂಟೆಗೆ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸಮೀಪದ ಮೈದಾನದಲ್ಲಿ ಒಟ್ಟಾಗಿ ಹಸಿರುವಾಣಿ ಹೊರೆಕಾಣಿಕೆ ಸಂಗ್ರಹಿಸಿ 3.30ಕ್ಕೆ ಬಿ.ಸಿ.ರೋಡ್ ಮುಖ್ಯ ವೃತ್ತದಿಂದ ಕ್ಷೇತ್ರಕ್ಕೆ ಆಕರ್ಷಕ ಮೆರವಣಿಗೆಯನ್ನು ಸಹಸ್ರಾರು ಸಂಖ್ಯೆಯ ಭಕ್ತರ ವಾಹನದಲ್ಲಿ ಕೊಂಡು ಹೋಗುವ ವ್ಯವಸ್ಥೆಗೆ ಸಜ್ಜಾಗುವಂತೆ ಸಲಹೆ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಕ್ಷೇತ್ರದಲ್ಲಿ ಮುಂದಕ್ಕೆ ನಡೆಯಲಿರುವ ಬ್ರಹ್ಮಕಲಶೋತ್ಸವ ಮತ್ತು ಹೊರೆಕಾಣಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಪುರಸಭಾ ಮಾಜಿ ಸದಸ್ಯ ಬಿ. ದೇವದಾಸ ಶೆಟ್ಟಿ ಸಹಿತ ಸಭೆಯಲ್ಲಿದ್ದರು ಹಲವು ಸಲಹೆ ಸೂಚನೆ ನೀಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಪುರಸಭಾ ಸದಸ್ಯ ಎ. ಗೋವಿಂದ ಪ್ರಭು, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ಪ್ರಮುಖರಾದ ಸುಲೋಚನಾ ಜಿ. ಕೆ. ಭಟ್, ಮಚ್ಚೆಂದ್ರನಾಥ ಸಾಲ್ಯಾನ್, ರಾಮದಾಸ್ ಕೋಟ್ಯಾನ್ ಮಜಿ, ಮೋಹನ ಕೆ. ಶ್ರೀಯಾನ್ ರಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕಿನಾದ್ಯಂತ ಎಲ್ಲ ಗ್ರಾಮಗಳಲ್ಲಿ ಸಭೆ ಕರೆದು ಸ್ಥಳೀಯರಿಂದ ಹೊರೆಕಾಣಿಕೆ ಸಂಗ್ರಹಿಸುವ ಬಗ್ಗೆ ಜವಾಬ್ದಾರಿಯನ್ನು ಪ್ರಮುಖರಿಗೆ ವಹಿಸಲಾಯಿತು. ವಿವಿಧ ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹೊರೆಕಾಣಿಕೆ ಮೆರವಣಿಗೆ ಯಶಸ್ವಿಗೊಳಿಸಲು ಸಲಹೆ ಸೂಚನೆ ನೀಡಿದರು. ಬಂಟ್ವಾಳ ತಾಲೂಕು ಹೊರೆಕಾಣಿಕೆ ಸಮಿತಿ ಸಂಚಾಲಕ ಚಂದ್ರಹಾಸ ಡಿ. ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಅಕ್ಕಿ, ತೆಂಗಿನ ಕಾಯಿ, ಸೀಯಾಳ, ಬಾಳೆ ಗೊನೆ, ಬಾಳೆ ಎಲೆ, ಅಡಿಕೆ, ಹಿಂಗಾರ, ಸಕ್ಕರೆ, ಬೇಳೆ, ಧಾನ್ಯ ಮತ್ತು ಇತರ ವಸ್ತುಗಳನ್ನು ಒಪ್ಪಿಸಲು ಅವಕಾಶವಿದ್ದು, ಒಂದು ತಿಂಗಳು ಜಾತ್ರೆ ನಡೆಯುವ ಹಿನ್ನೆಲೆಯಲ್ಲಿ ದೀರ್ಘ ಅವಧಿ ಬಾಳಿಕೆ ಬರುವ ತರಕಾರಿಯನ್ನೇ ನೀಡುವಂತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಹುಬ್ಬಳ್ಳಿಯ ಭಕ್ತರೊಬ್ಬರು ಎಂಟು ಟನ್ ಬೆಲ್ಲ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಸಭೆಯಲ್ಲಿ ಪ್ರಕಟಿಸಲಾಯಿತು.