ಬಂಟ್ವಾಳ ವರದಿ: ಯಾವುದೇ ಒಂದು ದೇಶದಲ್ಲಿರುವ ಯುವಜನತೆ ಆ ದೇಶದ ನಿಜವಾದ ಸಂಪತ್ತು, ಯುವಜನತೆ ಸಶಕ್ತವಾದರೆ ಇಡೀ ದೇಶವೇ ಅಭಿವೃದ್ಧಿಯಾಗುತ್ತದೆ ಎಂದು ಬಂಟ್ವಾಳದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ ಡಿ. ಎಸ್ ಹೇಳಿದರು.
ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳದ ವಕೀಲರ ಸಂಘ, ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಯಾರಾ ಲೀಗಲ್ ಸಮಿತಿ ಇವುಗಳ ಆಶ್ರಯದಲ್ಲಿ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಯುವ ದಿನ ಆಚರಣೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಪಠ್ಯವಿಷಯಗಳನ್ನು ಶ್ರಧ್ಧೆಯಿಂದ ಕಲಿಯುವುದರ ಜೊತೆಗೆ ಪಠ್ಯೇತರ ಮತ್ತು ಪಠ್ಯಪೂರಕ ಚಟುವಟಿಕೆಗಳಲ್ಲಿಯೂ ಆಸಕ್ತಿಯಿಂದ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ. ಗಿರೀಶ ಭಟ್ ಅಜಕ್ಕಳ ದೇಶದಲ್ಲಿ ಆಗಿಹೋದ ಮಹಾಪುರುಷರ ತತ್ವಗಳನ್ನು ಮತ್ತೆ ಮತ್ತೆ ಯುವಜನತೆ ನೆನಪು ಮಾಡಿಕೊಳ್ಳಬೇಕು; ಆ ಮೂಲಕ ಸತ್ಯ, ನ್ಯಾಯ, ಪರೋಪಕಾರ, ಧೈರ್ಯದಂಥ ಸಾರ್ವಕಾಲಿಕ ಮೌಲ್ಯಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಗಟ್ಟಿಗೊಳಿಸಿಕೊಳ್ಳಬೇಕು ಎಂದು ಹೇಳಿದರು. ಅವಕಾಶಗಳು ಹೆಚ್ಚಾದಂತೆ ಯುವಜನತೆ ತಮ್ಮ ಜವಾಬ್ದಾರಿಯ ಬಗ್ಗೆ ಅರಿವನ್ನೂ ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅವರು ವಿದ್ಯಾರ್ಥಿಗಳು ವಿವೇಕಾನಂದರ ಜೀವನ, ಸಾಧನೆ ಮತ್ತು ಬೋಧನೆಗಳನ್ನು ಅರಿತುಕೊಂಡು ದೇಶದ ಸಂಪನ್ಮೂಲಗಳಾಗಿ ಬೆಳೆಯಬೇಕು ಎಂದು ಕರೆಯಿತ್ತರು.
ವಕೀಲರ ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ ರಾವ್ ಪುಂಚಮೆ, ಪ್ಯಾನೆಲ್ ವಕೀಲರು ಹಾಗೂ ಬಂಟ್ವಾಳ ಆನ್ಸ್ ಕ್ಲಬ್ ಅಧ್ಯಕ್ಷರಾದ ಆಶಾಮಣಿ ರೈ, ನ್ಯಾಯವಾದಿ ಅಬ್ದುಲ್ ಜಲೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದು ರಾಷ್ಟ್ರೀಯ ಯುವ ದಿನದ ಪ್ರಸ್ತುತತೆ ಬಗ್ಗೆ ಮಾತನಾಡಿದರು. ಪ್ಯಾರಾ ಲೀಗಲ್ ಸಮಿತಿಯ ಸಂಚಾಲಕರಾದ ಪ್ರೊ. ಬಾಲಸುಬ್ರಹ್ಮಣ್ಯ ಪಿ. ಎಸ್. ಕಾರ್ಯಕ್ರಮ ಸಂಯೋಜಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವೈಶಾಲಿ ಯು ಸ್ವಾಗತಿಸಿದರು. ಮಮತಾ ವಂದಿಸಿದರು.