ಬಂಟ್ವಾಳ ವರದಿ: ಬಿ.ಸಿ.ರೋಡ್ – ಅಡ್ಡಹೊಳೆ ಚತುಷ್ಪಥ ಕಾಮಗಾರಿ ಮತ್ತೆ ಆರಂಭಗೊಳ್ಳಲಿದ್ದು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಿಂದಿನ ಯೋಜನೆಯಂತೆಯೇ ಕಾಮಗಾರಿ ನಡೆಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೂಚಿಸಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಂಟ್ವಾಳದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ೭೫ರ ಚತುಷ್ಪಥ ಕಾಮಗಾರಿ ಸಂದರ್ಭ ಸ್ಥಳೀಯರ ಬೇಡಿಕೆಯನ್ವಯ ಪ್ಲಾನ್ ನಲ್ಲಿ ಇದ್ದ ಕಲ್ಲಡ್ಕ ಫ್ಲೈಓವರ್ ಜೊತೆಗೆ ಹೆಚ್ಚುವರಿಯಾಗಿ ಮೇಲ್ಕಾರ್, ಪಾಣೆಮಂಗಳೂರು, ನೆಕ್ಕಿಲಾಡಿ ಮತ್ತು ಉಪ್ಪಿನಂಗಡಿ ಸಮೀಪ ಫ್ಲೈಓವರ್ ನಿರ್ಮಿಸಲು ಅಂದಾಜಿಸಲಾಗಿತ್ತು. ಆದರೆ ಈ ಫ್ಲೈಓವರ್ ಗಳನ್ನು ಹೆಚ್ಚುವರಿಯಾಗಿ ನಿರ್ಮಿಸಬೇಕಾದರೆ ಮತ್ತೆ ಟೆಂಡರ್ ಪ್ರಕ್ರಿಯೆ ಸಹಿತ ಹಲವು ಸಮಸ್ಯೆಗಳು ಇರುವ ಕಾರಣ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಈ ಬೇಡಿಕೆಗಳನ್ನು ಕೈಬಿಟ್ಟು ಮೊದಲಿನ ಯೋಜನೆ ಪ್ರಕಾರವೇ ಕಾಮಗಾರಿ ನಿರ್ಮಿಸಲು ಸೂಚಿಸಿದರು. ಈ ಮಧ್ಯೆ ಕೆಲ ದಿನಗಳ ಕಾಲ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ವಿನಾ ಕಾರಣ ಟೀಕೆ ಮಾಡಿವೆ ಎಂದರು.
ಫೆಬ್ರವರಿಯಲ್ಲಿ ಗಡ್ಕರಿ ಮಂಗಳೂರಿಗೆ:
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಂಗಳೂರಿಗೆ ಫೆಬ್ರವರಿ ಅಂತ್ಯದ ವೇಳೆಗೆ ಆಗಮಿಸಲಿದ್ದು, ಈ ಸಂದರ್ಭ ಪಂಪ್ ವೆಲ್ ಫ್ಲೈಓವರ್ ಉದ್ಘಾಟಿಸುವರು. ಬಿ.ಸಿ.ರೋಡ್ – ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ಪರಿಶೀಲನೆ, ಕುಲಶೇಖರ – ಕಾರ್ಕಳ ಚತುಷ್ಪಥ ಕಾಮಗಾರಿಗೆ ಶಿಲಾನ್ಯಾಸ ಕಾಮಗಾರಿ ನೆರವೇರಲಿದೆ ಎಂದು ನಳಿನ್ ಹೇಳಿದರು.
ನಂ.1 ಕೊಟ್ಟದ್ದೇ ಮಾಧ್ಯಮಗಳು:
ರಮಾನಾಥ ರೈ ಅವರು ಜನರ ಕೈಯಲ್ಲಿ ಪರಾಭವಗೊಂಡವರು. ಈಗಲೂ ಅವರು ಮಂತ್ರಿ ಅಂದುಕೊಂಡಿದ್ದಾರೆ. ನಾನೆಲ್ಲೂ ನಂ.೧ ಸಂಸದ ಎಂದು ಹೇಳಿಲ್ಲ. ಪತ್ರಿಕೆಗಳು ಸರ್ವೇ ನಡೆಸುವ ಸಂದರ್ಭ ನನ್ನ ಕಾರ್ಯಕ್ರಮಗಳನ್ನು ಪರಿಶೀಲಿಸಿ ನಂ.೧ ಸಂಸದ ಎಂದು ಹೇಳಿದ್ದಾರೆ. ಆದರೆ ರಮಾನಾಥ ರೈ ಅವರು ಸೋಲಿನ ಹತಾಶೆಯಿಂದ ನನ್ನ ಕುರಿತು ಹೇಳುತ್ತಿದ್ದು, ಈ ಹೇಳಿಕೆಗಳಿಗೆ ಉತ್ತರಿಸದಿರುವುದೇ ಸೂಕ್ತ ಎಂದು ನಳಿನ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಗೆ ತನ್ನ ಕೊಡುಗೆ ಏನೆಂದು ರೈ ಅವರು ವಿವರಿಸಬೇಕಾಗಿಲ್ಲ ಎಂದರು. ಕೇಂದ್ರ ಸರಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ಯೋಜನೆಗಳಿಗೆ ೨೦೧೪-೧೫ರಿಂದ ೨೦೧೮-೧೯ನೇ ಸಾಲಿಗೆ 1500 ಕೋಟಿ ರೂ ಬಿಡುಗಡೆಯಾಗಿದೆ ಎಂದು ನಳಿನ್ ಅಂಕಿ ಅಂಶಗಳಿರುವ ಮಾಹಿತಿಯ ಕೈಪಿಡಿಯನ್ನು ಒದಗಿಸಿದರು.