ಪ್ರಮುಖ ಸುದ್ದಿಗಳು

ಮಂಗನ ಕಾಯಿಲೆ ಕುರಿತು ಕಟ್ಟೆಚ್ಚರ – ಪರಿಸ್ಥಿತಿ ನಿಭಾಯಿಸಲು ತಾಲೂಕು ಮಟ್ಟದಲ್ಲಿ ಸಮಿತಿ

  • ಉನ್ನತ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

www.bantwalnews.com

ಮಂಗಳೂರು: ನೆರೆ ಜಿಲ್ಲೆಗಳಲ್ಲಿ ಮಂಗನಕಾಯಿಲೆ ವರದಿಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಮತ್ತು ಅರಣ್ಯದಂಚಿನಲ್ಲಿ ಈಗಾಗಲೇ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದ್ದು ಇನ್ನಷ್ಟು ಪರಿಣಾಮಕಾರಿಯಾಗಿ ಪರಿಸ್ಥಿತಿಯನ್ನು ನಿಭಾಯಿಸಲು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಣಾಧಿಕಾರಿ, ವಲಯ ಅರಣ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾ ಪಂಚಾಯತ್‍ನ ವಿಡಿಯೊ ಕಾನ್ಫರೆನ್ಸ್ ಹಾಲ್‍ನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಮುಂಜಾಗ್ರತ  ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಿರಂತರವಾಗಿ ಪರಿಸ್ಥಿತಿಯ ಮೇಲೆ ಕಣ್ಣಿರಿಸಲು ಸಮಿತಿ ರಚನೆ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳ ವಾಟ್ಸಾಪ್ ಗ್ರೂಪ್ ರಚಿಸಿ ಪಕ್ಕಾ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ವರದಿ ಮಾಡಲು ಆದೇಶಿಸಿದರು.
ಮಂಗಗಳ ದೇಹಗಳಲ್ಲಿರುವ ಉಣ್ಣೆಗಳಿಂದ ರೋಗ ಹರಡುತ್ತಿರುವುದರಿಂದ ಉಣ್ಣೆಗಳಿರುವ ಪ್ರದೇಶಗಳ ಗುರುತಿಸುವಿಕೆ ಹಾಗೂ ಮಂಗಗಳು ಮೃತಪಟ್ಟರೆ ಗುರುತಿಸಿ ವರದಿ ಮಾಡುವಿಕೆಗೆ ಆದ್ಯತೆ ನೀಡಿ ಹಾಗೂ ಈ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರಲ್ಲಿ ಅರಿವು ಮೂಡಿಸಲು ಪ್ರಮುಖ ಮಾಹಿತಿಯನ್ನೊಳಗೊಂಡ ನಾಲ್ಕು ಸಾಲಿನ ಮಾಹಿತಿ ಪತ್ರಗಳನ್ನು ವಿತರಿಸಿ ಎಂದ ಜಿಲ್ಲಾಧಿಕಾರಿಗಳು, ಮುಂಜಾಗ್ರತೆಗೆ ಡಿಎಂಪಿ ಎಣ್ಣೆಯನ್ನು ತರಿಸಿ ಅರಣ್ಯದಂಚಿನಲ್ಲಿರುವವರಿಗೆ ವಿತರಿಸಿ ಎಂದು ಹೇಳಿದರು.
ಉಣ್ಣೆಗಳಿಂದ ಮಾತ್ರ ಹರಡುವ ಈ ಕಾಯಿಲೆ ಬಗ್ಗೆ ಜನರು ಗಾಬರಿಗೊಳಗಾಗದೆ ಆರೋಗ್ಯ ಇಲಾಖೆಯ ಸೂಚನೆಯಂತೆ ಸುರಕ್ಷಾ ಕ್ರಮಗಳನ್ನು ವಹಿಸುವುದರಿಂದ ಪರಿಸ್ಥಿತಿ ಕೈಮೀರದಂತೆ ನಿಭಾಯಿಸಲು ಸಾಧ್ಯವಿದೆ ಎಂದರು. ಜಿಲ್ಲೆಯಲ್ಲಿ ಕಾಯಿಲೆಯ ಚರಿತ್ರೆಯ ಬಗ್ಗೆ ಇದೇ ವೇಳೆ ಅವರು ಮಾಹಿತಿಯನ್ನು ಆರೋಗ್ಯ ಇಲಾಖಾ ವೈದ್ಯರಿಂದ ಪಡೆದುಕೊಂಡರು. ಅರಣ್ಯ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್‍ಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸುವ ಜೊತೆಗೆ ಜಿಲ್ಲೆಯಲ್ಲಿ ಹೆಚ್ಚಿನ ಜನರು ಜ್ವರ ಬಂದ ವೇಳೆ ಖಾಸಗಿ ಡಾಕ್ಟರ್‍ಗಳ ಬಳಿ ತೆರಳುವುದು ಸಾಮಾನ್ಯ. ಈ ವೇಳೆ ಮಂಗನ ಕಾಯಿಲೆ ಲಕ್ಷಣಗಳು ವರದಿಯಾದರೆ ಖಾಸಗಿ ಡಾಕ್ಟರ್‍ಗಳು ತಕ್ಷಣವೇ ಡಿಎಚ್‍ಒ ಅವರಿಗೆ ವರದಿ ಮಾಡತಕ್ಕದ್ದು ಎಂದರು.
ಮಂಗನ ಕಾಯಿಲೆಗೆ ಕಾರಣವಾಗುವ ಹೀಮೋಫೈಸಾಲಿಸ್ ಸ್ಪಿನಿಜೆರಾ ವೈರಸ್ ಸಾಮಾನ್ಯವಾಗಿ ನವೆಂಬರ್‍ನ ಚಳಿಗಾಲದಲ್ಲಿ ಆರಂಭವಾಗಿ ಫೆಬ್ರವರಿಯವರೆಗೆ ಪ್ರಭಲವಾಗಿರುತ್ತದೆ ಎಂದು ಡಾ ಅರುಣ್ ವಿವರಿಸಿದರು. ಉಣ್ಣೆಗಳು ಹರಡದಂತೆ ಮಲಥಿಯಾನ್ ಎಂಬ ದ್ರಾವಣ ಸಿಂಪಡಿಸುವುದರಿಂದ ಅರಣ್ಯದಂಚುಗಳು ಸುರಕ್ಷಿತವಾಗಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಿಇಒ ಡಾ ಸೆಲ್ವಮಣಿ,ಡಿಎಚ್‍ಒ ರಾಮಕೃಷ್ಣ ರಾವ್, ವಲಯ ಅರಣ್ಯಅಧಿಕಾರಿ ಶ್ರೀಧರ್ ಕೆಎಂಸಿ, ಯೆನಪೋಯ, ಫಾದರ್‍ಮುಲ್ಲರ್ಸ್‍ನ ವೈದ್ಯರು, ತಾಲೂಕು ಆರೋಗ್ಯಾಧಿಕಾರಿಗಳು, ಕೀಟಶಾಸ್ತ್ರಜ್ಞರು, ಡ್ರಗ್ ಕಂಟ್ರೋಲರ್ ಸಭೆಯಲ್ಲಿದ್ದರು.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts