ಬಂಟ್ವಾಳ ವರದಿ: ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ದಕ್ಷಿಣ ಕನ್ನಡ ಕ್ಷೇತ್ರ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಕಟುಟೀಕೆ ಮಾಡಲು ಹಾಗೂ ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿರಲು ಕಾರ್ಯಕರ್ತರಿಗೆ ಕರೆ ನೀಡಲು ಹಾಸನ, ಗುಂಡ್ಯ, ಬಿ.ಸಿ.ರೋಡ್ ರಸ್ತೆ ಕಾಮಗಾರಿ ಪುನರಾರಂಭಿಸಲು ಒತ್ತಾಯಿಸಿ ನಡೆದ ಕಾಲ್ನಡಿಗೆ ಜಾಥಾದ ಸಮಾರೋಪ ವೇದಿಕೆ ಒದಗಿಸಿತು.
ಬುಧವಾರ ಬಿ.ಸಿ.ರೋಡಿನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾಷಣಕಾರರು ಲೋಕಸಭೆ ಚುನಾವಣೆಗೆ ಸಜ್ಜಾಗುವಂತೆ ಹಾಗೂ ಬಿಜೆಪಿಯ ಅಪಪ್ರಚಾರದ ವಿರುದ್ಧ ಎಚ್ಚರವಿರುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ನರೇಂದ್ರ ಮೋದಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಟುವಾದ ಶಬ್ದಗಳಲ್ಲಿ ಟೀಕಾಪ್ರಹಾರ ನಡೆಸಿದ ರಮಾನಾಥ ರೈ, ಇಂದಿರಾಗಾಂಧಿ ಸಹಿತ ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಇದ್ದಾಗ ಜನರ ಕಲ್ಯಾಣವಾದದ್ದು ಇಂದಿನ ಜನರಿಗೆ ಮರೆತುಹೋಗಿರುವುದು ವಿಷಾದನೀಯ ಎಂದರು. ಕೇಂದ್ರ ಸರಕಾರ ಮತ್ತು ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ವೈಫಲ್ಯವನ್ನು ಜನರಿಗೆ ತೋರಿಸುವ ಕೆಲಸವನ್ನು ಇಂದು ಪಾದಯಾತ್ರೆ ಮೂಲಕ ಕಾಂಗ್ರೆಸ್ ಮಾಡಿದೆ. ನರೇಂದ್ರ ಮೋದಿ ಹಿಟ್ಲರ್ ಆಗಲು ಬಿಡಬೇಡಿ, ಇಲ್ಲಿನ ಸಂಸದರು ಏನೂ ಮಾಡಿಲ್ಲ ಎಂಬುದನ್ನು ಜನರಿಗೆ ತಿಳಿಸಿ. ಇಳಿಸಿ. ನಳಿನ್ ಸ್ವಯಂಘೋಷಿತ ನಂ.1 ಸಂಸದ ಆದರೆ ಕಾಂಗ್ರೆಸ್ ನಿಂದ ದ.ಕ.ದಲ್ಲಿ ಆಯ್ಕೆಯಾದ ಸಂಸದರು ನಿಜವಾದ ನಂ.1 ಎಂದ ರೈ, ಪ್ರಧಾನಿ ಮೋದಿ ಉದ್ದಿಮೆದಾರರ ಸಾಲ ಮನ್ನಾ ವಿಚಾರದಲ್ಲಿ ಹುಂ ಎನ್ನುತ್ತಾರೆ ಆದರೆ ರೈತರ ಸಾಲ ಮನ್ನಾ ವಿಚಾರದಲ್ಲಿ ಉಹೂಂ ಎನ್ನುತ್ತಾರೆ ಎಂದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಸರಕಾರ ಸುಭದ್ರವಾಗಿದೆ, ಬಿಜೆಪಿಯವರು ಟೆಸ್ಟ್ ಮ್ಯಾಚ್ ಆಡಲಿ, ನಾವು ಒನ್ ಡೇ ಮ್ಯಾಚ್ ಆಡ್ತೇವೆ ಎಂದರು. ಕಾರ್ಯಕರ್ತರು ಈಗಿಂದೀಗಲೇ ಚುನಾವಣೆಗೆ ಸಜ್ಜಾಗಬೇಕು, ಬಿಜೆಪಿ ಅಪಪ್ರಚಾರ, ಸಂಸದರ ವೈಫಲ್ಯ, ಕೇಂದ್ರ ಸರಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್ ಮಾತನಾಡಿ, ಸಮ್ಮಿಶ್ರ ಸರಕಾರ ಸುಭದ್ರವಾಗಿದೆ, ನಮ್ಮ ಐದು ಜನ ಪಾರ್ಟಿ ಬಿಟ್ರೆ, ಅವರ ಹತ್ತು ಜನ ನಮ್ಮೆಡೆ ಬರುತ್ತಾರೆ, ಓಟು ಕೇಳುವಾಗ ಎಲ್ಲ ಫ್ರೀ ಮಾಡ್ತೀವಿ ಎನ್ನುತ್ತಾರೆ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ಮಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸವಿತಾ ರಮೇಶ್ ಮಾತನಾಡಿ, ಬಿಜೆಪಿ ರಸ್ತೆಯಲ್ಲಿ ಪ್ರಾಣ ಕಳೆದುಕೊಳ್ಳುವ ಜನರ ಅಭಿವೃದ್ಧಿ ಮಾಡಲಿಲ್ಲ ಎಂದು ದೂರಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಐಸಿಸಿ ಸದಸ್ಯ ಅಮೃತ್ ಶೆಣೈ ಮಾಜಿ ಶಾಸಕ ಮೊಯ್ದೀನ್ ಬಾವ ಮಾತನಾಡಿ, ಕೇಂದ್ರ ಸರಕಾರ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಟೀಕಾಪ್ರಹಾರ ನಡೆಸಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುವಂತೆ ಪಣತೊಡಬೇಕು ಎಂದರು. ವಿಧಾನಪರಿಷತ್ತು ಸದಸ್ಯ , ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾಧವ ಮಾವೆ, ಎಂ.ಎಸ್.ಮೊಹಮ್ಮದ್, ಮಮತಾ ಗಟ್ಟಿ, ಶಾಹುಲ್ ಹಮೀದ್, ಅನಿತಾ ಹೇಮನಾಥ ಶೆಟ್ಟಿ, ಮಂಗಳೂರು ಮೇಯರ್ ಭಾಸ್ಕರ್, ಕೆಪಿಸಿಸಿ ಸದಸ್ಯ ಡಾ.ರಘು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಪಕ್ಷ ಪ್ರಮುಖರಾದ ಬಿ.ಎಚ್.ಖಾದರ್, ಕಣಚೂರು ಮೋಣು, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಸಹಿತ ಪಕ್ಷದ ಹಲವು ಪ್ರಮುಖರು ಉಪಸ್ಥಿತರಿದ್ದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.