ಬಂಟ್ವಾಳ

ಕಾರಂಬಡೆ ಶ್ರೀ ಮಹಮ್ಮಾಯಿ ದೇವಾಲಯದ ಬಾಲಾಲಯ ಪ್ರತಿಷ್ಠೆ

www.bantwalnews.com

ಬಂಟ್ವಾಳ: ಇಲ್ಲಿನ ಕಸಬಾ ಗ್ರಾಮದಲ್ಲಿರುವ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರವನ್ನು ಪುನರ್ ನಿರ್ಮಿಸಲು ಸಂಕಲ್ಪಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಜ.೨೦ರಂದು ಬಾಲಾಲಯ ಪ್ರತಿಷ್ಠೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಕೋಟ್ಯಾನ್ ತಿಳಿಸಿದ್ದಾರೆ.       ಸೋಮವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.19ರಂದು ವಿವಿಧ ವೈಧಿಕ ಕಾರ‍್ಯಕ್ರಮಗಳು ನಡೆಯಲಿದೆ ಎಂದರು.
ಜ. 20ರಂದು ಬೆಳಿಗ್ಗೆ  ೮-೩೨ಕ್ಕೆ  ಶ್ರೀ ಮಹಮ್ಮಾಯಿ ದೇವರ ಬಾಲಾಲಯ ಪ್ರತಿಷ್ಠೆ, ಐಕ್ಯಮತ್ಯ ಹೋಮ ಮತ್ತು ೧೦೮ಕಾಯಿ ಗಣಯಾಗ ನಡೆಯಲಿದ್ದು,  ಬಳಿಕ ಶಾಸಕ ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.  ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶ್ರೀರ್ವಚನ ನೀಡುವರು. ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ದೀಪ ಪ್ರಜ್ವಲನ ಮಾಡುವರು.  ಮಾಜಿ ಸಚಿವ ಬಿ.ರಮಾನಾಥ ರೈ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸುವರು. ಜ್ಯೋತಿಷ್ಯ ವಿದ್ವಾನ್ ಸತೀಶ್ ಪಣಿಕ್ಕರ್, ಪುರೋಹಿತರಾದ ಕೇಶವ ಶಾಂತಿ ನಾಟಿ, ಉಧ್ಯಮಿ ಸಂತೋಷ್ ಕುಮಾರ್ ಕೊಟ್ಟಿಂಜ, ಶ್ರೀ ಕ್ಷೇ. ಧ.ಗ್ರಾ. ಯೋ.ಯ ಬಂಟ್ವಾಳ ಯೋಜನಾಧಿಕಾರಿ ಜಯಾನಂದ್, ಪುರಸಭಾ ಸದಸ್ಯರಾದ ವಾಸು ಪೂಜಾರಿ ಲೊರೆಟ್ಟೊ, ಮೀನಾಕ್ಷಿ, ಗಂಗಾಧರ ಪೂಜಾರಿ, ಜನಾರ್ಧನ ಚೆಂಡ್ತಿಮಾರು, ದೇವಕಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪುನರ್‌ನಿರ್ಮಾಣ ಸಂಕಲ್ಪ: 
ಬಂಟ್ವಾಳ ಕಸಬಾ ಗ್ರಾಮದ ಕಾರಂಬಡೆ ಎಂಬಲ್ಲಿರುವ ಪ್ರಕೃತಿ ರಮಣೀಯ ಹಚ್ಚಹಸಿರ ಸುಂದರ ಪರಿಸರದಲ್ಲಿರುವ ಶ್ರೀ ಮಹಮ್ಮಾಯಿ ಕ್ಷೇತ್ರವು ಭಕ್ತರ ಇಷ್ಠಾರ್ಥ ಸಿದ್ಧಿಸುವ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಶ್ರೀ ಮಹಾಮ್ಮಾಯಿಯೊಂದಿಗೆ ಶ್ರೀ ಗಣಪತಿ , ಶ್ರೀ ಗುರು, ಶ್ರೀ ನಾಗಬ್ರಹ್ಮ, ರಕ್ತೇಶ್ವರೀ, ಗುಳಿಗ, ಮಹಾಮ್ಮಾಯಿ ಗುಳಿಗ, ಕಾಲಭೈರವ, ಕಲ್ಲುರ್ಟಿ, ಪಂಜುರ್ಲಿ, ಧೂಮಾವತಿ, ಬಂಟ, ಮಾಡಕೊರತಿ, ಕುಪ್ಪೆಟ್ಟು ಪಂಜುರ್ಲಿ, ಮಂತ್ರದೇವತೆ, ಸತ್ಯದೇವತೆ, ಸಂಕೊಲೆ ಗುಳಿಗ, ರಾಹುಗುಳಿಗ, ಕೊರಗಜ್ಜ ಮೊದಲಾದ ದೈವಗಳ ಸಾನಿಧ್ಯವಿದೆ ಎಂದರು.
ಸಿಡುಬು ಮೊದಲಾದ ಅಂಟುರೋಗಗಳು, ಜಾನುವಾರು ರೋಗಗಳು, ಕಷ್ಟಕಾರ್ಪಣ್ಯಗಳ ನಿವಾರಣೆ ಸಹಿತ ವಿವಾಹ ಸಂಬಂಧ, ಸಂತಾನ ಭಾಗ್ಯ ಕೂಡಿ ಬರುವರೇ ಭಕ್ತಾದಿಗಳು ಈ ಕ್ಷೇತ್ರಕ್ಕೆ ಹರಕೆ ಸಲ್ಲಿಸಿ ತಮ್ಮ ಇಷ್ಠಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ದೇವಿಗೆ ನಿತ್ಯ ಪೂಜೆ, ವಿಶೇಷ ಪೂಜೆಗಳು, ಕಾಳಬೈರವನಿಗೆ ಕೋಳಿ-ಕುರಿ ಬಲಿಗಳ ಸೇವೆ, ಮಹಾನವಮಿಯ ಒಂಬತ್ತು ದಿನ ವಿಶೇಷ ಉತ್ತವ, ಮಾರಿಪೂಜೆ, ರಾಶಿಪೂಜೆಗಳು ವಿಧಿವತ್ತಾಗಿ ನಡೆದುಕೊಂಡು ಬರುತ್ತಿದೆ ಎಂದು ವಿವರಿಸಿದರು.  ಕ್ಷೇತ್ರದಲ್ಲಿ ನಡೆದಿರುವ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದ ಪ್ರಕಾರ ಶ್ರೀ ಕ್ಷೇತ್ರವು 800 ವರ್ಷಗಳ ಇತಿಹಾಸವಿರುವ ಅತ್ಯಂತ ಪುರಾತನವಾದ ಕಾರಣೀಕ ಕ್ಷೇತ್ರವಾಗಿದ್ದು ಶಿಥಿಲಾವಸ್ಥೆಯಲ್ಲಿರುವ ಈ ಕ್ಷೇತ್ರವನ್ನು ಸುಮಾರು 2.50 ಕೋ.ರೂ.ವೆಚ್ಚದಲ್ಲಿ  ಪುನರ್‌ನಿರ್ಮಿಸಲು ಸಂಕಲ್ಪಿಸಲಾಗಿದ್ದು, ಭಕ್ತರ ಸಹಕಾರವನ್ನು ಯಾಚಿಸಲಾಗಿದೆ ಎಂದರು.  ಅನುವಂಶಿ ಆಡಳಿತ ಮೊಕ್ತೇಸರ ಅರುಣ್ ಕುಮಾರ್ ,ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳಾದ ನಾಗೇಶ್ ದರ್ಬೆ,ಜಯಶಂಕರ್ ಕಾನ್ಸಾಲೆ,ಭಾಸ್ಕರ ಅಜೆಕಲ, ಮಚ್ಚೇಂದ್ರ ಸಾಲಿಯಾನ್,  ಗೋಪಾಲ ಅಂಚನ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.
ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.