www.bantwalnews.com Editor: Harish Mambady
ಕಲ್ಲಡ್ಕ ವರದಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ನೇತೃತ್ವದಲ್ಲಿ ಸಂಕ್ರಾಂತಿಯ ದಿನವಾದ ಸೋಮವಾರ, ಕಲ್ಲಡ್ಕದ ಶ್ರೀರಾಮ ಮಂದಿರದಲ್ಲಿ 43ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ, ಹೈಮಾಸ್ಟ್ ದೀಪ ಉದ್ಘಾಟನೆ ಮತ್ತು ಮಂದಿರದ ಲಿಫ್ಟ್ ಉದ್ಘಾಟನೆ ನಡೆಯಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಪ್ರಭಾಕರ ಎಂದರೆ ಬೆಳಕು ನೀಡುವವರು. ಕಲ್ಲಡ್ಕ ಡಾ. ಪ್ರಭಾಕರ ಭಟ್ ತಮ್ಮ ಹೆಸರಿನಂತೆ ಸಮಾಜಕ್ಕೆ ಬೆಳಕು ನೀಡುವ ಕಾರ್ಯವನ್ನು ಮಾಡುತ್ತಿದ್ದು, ಅವರಿಗೆ ಯಾವುದೇ ಆಪತ್ತು ಬಾರದೇ ಇರಲಿ ಎಂದು ಆಶೀರ್ವದಿಸಿದರು. ಅಯೋಧ್ಯೆಯಲ್ಲಿ ರಾಮಮಂದಿರ ಆಗದೆ ನಮಗೆ ವಿಶ್ರಾಂತಿ ಇಲ್ಲ ಎಂದ ಅವರು, ಶ್ರೀರಾಮನ ಸೇವೆ ಮಾಡಲು ಕಟಿಬದ್ಧರಾಗಿ ವಿಶೇಷ ಪ್ರಾರ್ಥನೆ ಮಾಡಿರಿ. ಶ್ರೀರಾಮನ ಸೇವಕರಾಗಿ ಹನುಮಂತನಂತೆ ಸದಾ ದುಡಿಯಿರಿ ಎಂದು ಭಕ್ತರಿಗೆ ಸಂದೇಶ ನೀಡಿದರು.
ಈ ಸಂದರ್ಭ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ನಾರಾಯಣ ಸೋಮಯಾಜಿ, ಮಂದಿರದ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ, ಕ.ಕೃಷ್ಣಪ್ಪ, ದಿನೇಶ್ ಅಮ್ಟೂರು, ಸುಜಿತ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು. ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿದರು. ಕ.ಕೃಷ್ಣಪ್ಪ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಹೈಮಾಸ್ಟ್ ದೀಪವನ್ನು ಶ್ರೀಗಳು ಉದ್ಘಾಟಿಸಿದರು. ಕಲ್ಲಡ್ಕದಾದ್ಯಂತ ಪೊಲೀಸರು ವಿಶೇಷ ಬಂದೋಬಸ್ತ್ ಏರ್ಪಡಿಸಿದ್ದರು.