www.bantwalnews.com Editor: Harish Mambady
ಬಂಟವಾಳ ಬಂಟರ ಸಂಘದ ವಾರ್ಷಿಕೋತ್ಸವ ಸಾಂಸ್ಕೃತಿಕ ವೈಭವದೊಂದಿಗೆ ಜ.13ರ ಭಾನುವಾರ ಇಡೀ ದಿನ ತುಂಬೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಂಟವಾಳ ಬಂಟರ ಭವನದಲ್ಲಿ ನಡೆಯಿತು.
ಬೆಳಗ್ಗೆ 10 ಗಂಟೆಯಿಂದ ಬಂಟೆರೆ ಕಲಾಪಂಥ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾರ್ಗದರ್ಶನದಲ್ಲಿ ಆರಂಭಗೊಂಡಿತು. ವಿಶಿಷ್ಟ ಶೈಲಿಯಲ್ಲಿ ನಡೆದ ಈ ಉದ್ಘಾಟನಾ ಸಮಾರಂಭದಲ್ಲಿ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಜಗದೀಶ ಶೆಟ್ಟಿ ಇರಾಗುತ್ತು, ಸಹಕಾರ್ಯದರ್ಶಿ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಮಹಿಳಾ ವಿಭಾಗ ಅಧ್ಯಕ್ಷೆ ಆಶಾ ಪಿ. ರೈ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಸಾಂಸ್ಕೃತಿಕ ಸಮಿತಿ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಚಲನಚಿತ್ರ ನಟಿ ನೀತೂ ಶೆಟ್ಟಿ ಭಾಗವಹಿಸಿದರು.
ಜಿಲ್ಲೆಯ ವಿವಿಧ 10 ತಂಡಗಳು ತಲಾ 20 ನಿಮಿಷಗಳ ಪ್ರದರ್ಶನ ನೀಡಿದ್ದು, ಸುರತ್ಕಲ್ ತಂಡ ಪ್ರಥಮ ಕಾರ್ಕಳ ತಂಡ ದ್ವಿತೀಯ ಸ್ಥಾನ ಗಳಿಸಿದವು. ರಾತ್ರಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆ.ಕೆ.ಪೂಂಜ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗ್ರಿಗುತ್ತು ವಿವೇಕ್ ಶೆಟ್ಟಿ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಕೆ.ಪ್ರಕಾಶ್ ಶೆಟ್ಟಿ ಮತ್ತು ರತ್ನಾಕರ ಶೆಟ್ಟಿ ಮುಂಡ್ಕೂರು, ಮಾಜಿ ಸಚಿವ ಬಿ.ರಮಾನಾಥ ರೈ ಭಾಗವಹಿಸಿದರು. ಈ ಸಂದರ್ಭ ಮಾತನಾಡಿದ ಗುರುಕಿರಣ್, ಬಂಟರು ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ, ಬಂಟರ ಕಲಾ ಪಂಥದ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಟ್ಟುಗೂಡಿಸಿದಂತಾಗಿದೆ. ಕಾರ್ಯಕ್ರಮ ಸಂಘಟಿಸಿದ ತಾಲೂಕು ಬಂಟರ ಸಂಘದ ಕೆಲಸ ಅದ್ಭುತವಾಗಿದೆ ಎಂದರು. ಪ್ರಕಾಶ್ ಶೆಟ್ಟಿ ಮಾತನಾಡಿ, ಬಂಟರಸಮುದಾಯವನ್ನು ಜಗತ್ತೇ ಗುರುತಿಸಿದೆ. ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಬಂಟರು ತಮ್ಮ ಸಾಧನೆ ಮೂಲಕ ಛಾಪು ಮೂಡಿಸಿದ್ದಾರೆ ಎಂದರು.
ಕದ್ರಿ ನವನೀತ ಶೆಟ್ಟಿ ಇಡೀ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು.