ಬಂಟ್ವಾಳ ವರದಿ: ಶಿಕ್ಷಣ ಸಚಿವರ ಶೀಘ್ರ ನೇಮಕ, ಶಾಲಾ ಮಕ್ಕಳ ಸೈಕಲ್ ವಿತರಣೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿ.ಸಿ.ರೋಡ್ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಶನಿವಾರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಧರಣಿ ನಡೆಯಿತು.
ಸಿಎಫ್‌ಐ ರಾಜ್ಯ ಸಮಿತಿ ಸದಸ್ಯ ಅಶ್ವಾನ್ ಸಾಧಿಕ್ ಮಾತನಾಡಿ, ರಾಜ್ಯದ ಸಚಿವಾಲಯದಲ್ಲಿ ಪ್ರಮುಖ ಇಲಾಖೆಯಾದ ಶಿಕ್ಷಣ ಇಲಾಖೆಯಲ್ಲಿ ಸಚಿವರಿಲ್ಲದೆ, ಇಲಾಖೆಯೇ ನಿರ್ಜೀವವಾಗಿದೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಶಿಕ್ಷಣ ಸಚಿವರನ್ನು ಇನ್ನೂ ನೇಮಿಸದೇ ಇರುವ ಶಿಕ್ಷಣ ವಿರೋಧಿ ನೀತಿಯನ್ನು ಸಿಎಫ್ ಖಂಡಿಸುತ್ತದೆ. ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮತ್ತು ಶಿಕ್ಷಣ ಸಚಿವರ ಶೀಘ್ರ ನೇಮಕ ಮಾಡದಿದ್ದಲ್ಲಿ ಸಿಎಫ್‌ಐ ವತಿಯಿಂದ ತಾಲೂಕಿನಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಇನ್ನೊಂದೆಡೆ ಪದವಿ ಪೂರ್ವ ಶಿಕ್ಷಣ ಇಲಾಖೆಗಳಲ್ಲಿ ೩ ತಿಂಗಳಿನಿಂದ ಪೂರ್ಣಾವಧಿ ನಿರ್ದೇಶಕರಿಲ್ಲದೆ ಹಾಗೂ ಪ್ರಮುಖ ಹುದ್ದೆಗಳಾದ ಜಂಟಿ ನಿರ್ದೇಶಕರು ಮತ್ತು ಉಪನಿರ್ದೇಶಕರಿಲ್ಲದೆ ವ್ಯವಸ್ಥೆಯೇ ಸ್ಥಗಿತಗೊಂಡಿದೆ. ಇಂತಹ ಸಮಸ್ಯೆಗಳನ್ನು ಮನಗಂಡು ಸರಕಾರ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಬಳಿಕ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ದ.ಕ.ಸರ್ವ ಕಾಲೇಜು ವಿಧ್ಯಾರ್ಥಿ ಸಂಘದ ಕಾರ್ಯದರ್ಶಿ ಮುಹಮ್ಮದ್ ಅಶ್ವರ್, ಸರ್ವ ಕಾಲೇಜು ವಿಧ್ಯಾರ್ಥಿ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷ ಝಿಯಾನ್ ಗೂಡಿನಬಳಿ ಹಾಜರಿದ್ದರು. ಪರಾಝ್ ಬಂಟ್ವಾಳ ಸ್ವಾಗತಿಸಿ, ವಂದಿಸಿದರು.