ಉತ್ತಮ ಮಾತುಗಾರಿಕೆಯಿಂದ ನಮ್ಮ ಭಾವನೆಗಳನ್ನು ಸಮೂಹಕ್ಕೆ ದಾಟಿಸಬಹುದು. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಮಾತುಗಾರಿಕೆ ಅಭ್ಯಾಸ ಮಾಡಿದರೆ ಔದ್ಯೋಗಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು. ಜೇಸಿಐ ಇಂತಹ ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವುದು ಶ್ಲಾಘನೀಯ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರು ಹೇಳಿದರು.
ಅವರು ಜೇಸಿಐ ಜೋಡುಮಾರ್ಗ ನೇತ್ರಾವತಿ ಮತ್ತು ಸ್ವಸ್ತಿಕಾ ಕನ್ಸಲ್ಟೆನ್ಸಿ ಸಹಯೋಗದಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪೌಢಶಾಲೆ ಶಂಭೂರು ಇಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಕಮಲಾಕ್ಷ ಕಲ್ಲಡ್ಕ, ನಿವೃತ್ತ ಉಪತಹಸೀಲ್ದಾರ್ ಪರಮೇಶ್ವರ ಮೊಯಿಲಿ, ೨೦೧೯ರ ಜೇಸಿ ನಿಯೋಜಿತ ಅಧ್ಯಕ್ಷರಾದ ಹರ್ಷರಾಜ್ ಸಿ., ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ಜೇಸಿರೆಟ್ ಅಧ್ಯಕ್ಷೆ ಅಮಿತಾ ಹರ್ಷರಾಜ್, ಜ್ಯೂನಿಯರ್ ಜೇಸಿ ಅಧ್ಯಕ್ಷ ರೋನಿತ್ ಉಪಸ್ಥಿತರಿದ್ದರು. ಜೇಸಿಐ ವಲಯ ತರಬೇತುದಾರರಾದ ರಾಜೇಶ್ವರಿ ಡಿ. ಶೆಟ್ಟಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಶಿಕ್ಷಕ ಹಾಗೂ ಜೇಸಿ ಉಪಾಧ್ಯಕ್ಷ ಹರಿಪ್ರಸಾದ್ ಕುಲಾಲ್ ಸ್ವಾಗತಿಸಿ, ರೋನಿತ್ ವಂದಿಸಿದರು. ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.