ಬಂಟ್ವಾಳ

ಗಟ್ಟಿ ಧ್ವನಿಯಿದ್ದರೆ ಪ್ರಜೆಗಳು ಬಯಸಿದಂತೆ ಶಿಕ್ಷಣ ನೀತಿ ರೂಪಿಸಲು ಸಾಧ್ಯ: ರಾಜ್ಯಪಾಲ

www.bantwalnews.com Editor: Harish Mambady

ಬಂಟ್ವಾಳನ್ಯೂಸ್ ವರದಿ:

ಗಟ್ಟಿ ಧ್ವನಿಯಲ್ಲಿ ನಮಗಿಂಥ ಶಿಕ್ಷಣ ಬೇಕು ಎಂದು ಪ್ರಜೆಗಳು ಹೇಳಿದರೆ ಅದನ್ನೇ ಸರಕಾರ ರೂಪಿಸುತ್ತದೆ. ತಮ್ಮ ಮಕ್ಕಳಿಗೆ ಯಾವ ಶಿಕ್ಷಣ ಬೇಕು ಎಂಬ ನಿರ್ಧಾರ ಪ್ರಜೆಗಳ ಕೈಯಲ್ಲಿದೆ. ಜ್ಞಾನಿಗಳಾಗಿ, ಧೈರ್ಯಶಾಲಿಗಳಾಗಿ, ರಾಷ್ಟ್ರಕ್ಕಾಗಿ ಬದುಕು ಸಾಗಿಸುವ ಬಲಾಢ್ಯ ಪ್ರಜೆಗಳನ್ನು ರೂಪಿಸಲು ವಿದ್ಯೆ ಅವಶ್ಯ. ಕನ್ನಡ ಭಾಷೆಯಲ್ಲಿ ಬೇಕೋ, ಇಂಗ್ಲೀಷ್ ಭಾಷೆಯಲ್ಲಿ ಬೇಕೋ ಎಂಬ ನಿರ್ಣಯವನ್ನು ಮಾಡುವವರು ನೀವೇ.

  • ಕರ್ನಾಟಕ ರಾಜ್ಯಪಾಲ ವಜೂಬಾಯಿ ರೂಡಾಬಾಯಿವಾಲಾ ಬಂಟ್ವಾಳ ತಾಲೂಕಿನ ಮೂಡುನಡುಗೋಡುವಿನಲ್ಲಿರುವ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆಯನ್ನು ದತ್ತು ಸ್ವೀಕರಿಸಿದ ಕರಿಂಕೆ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನಿರ್ಮಿಸಿದ ಮೇಲಂತಸ್ತಿನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸೇರಿದ್ದ ಸಭಿಕರನ್ನುದ್ದೆಶಿಸಿ ಹೇಳಿದ್ದು ಹೀಗೆ.

ರಾಜ್ಯಪಾಲರ ಭಾಷಣದ ಹೈಲೈಟ್ಸ್ ಇವು.

  • ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ತಂಡದಿಂದ ನಡೆಸಿರುವುದು ಮಾದರಿ ಕಾರ್ಯ, ಇದು ಉಳಿದ ಶಾಲೆಗಳಿಗೂ ಪ್ರೇರಣೆಯಾಗಲಿ, ಮುಂದಿನ ವರ್ಷ ಕಾಲೇಜಿನ ಕಟ್ಟಡ ನಿರ್ಮಾಣವಾಗುವಂತಾಗಲಿ.
  • ಅನ್ನದಾನ, ಕನ್ಯಾದಾನಗಳಿಗಿಂತಲೂ ವಿದ್ಯಾದಾನವೇ ಶ್ರೇಷ್ಠ . ವಿದ್ಯೆಯೊಂದಿದ್ದರೆ ಪ್ರಪಂಚದ ಎಲ್ಲ ಭಾಷೆಗಳನ್ನು ಕಲಿಯಬಹುದು. ನಮ್ಮ ದೇಶ ಪ್ರಗತಿಯಾಗಿದೆ ಎಂಬುದನ್ನು ನಿರೂಪಿಸಬೇಕಾದರೆ ಶೇ.೧೦೦ ಸಾಕ್ಷರವಾಗಬೇಕು. ಎಲ್ಲರೂ ಪದವಿ, ಸ್ನಾತಕೋತ್ತರ ಪದವಿಯನ್ನು ಪಡೆಯುವ ಗುರಿ ಹೊಂದಬೇಕು.
  • ತಿನ್ನುವುದರಲ್ಲಿ ಆನಂದಪಡುವವನು ಹೇಗೆ ಹಸಿದವನನ್ನು ಹೊಟ್ಟೆ ತುಂಬಿಸುವತ್ತ ಗಮನ ನೀಡಬೇಕೋ ಹಾಗೆ ವಿದ್ಯೆಯನ್ನು ಎಲ್ಲರೂ ಹೊಂದುವಂತೆ ಮಾಡುವುದು ನಮ್ಮ ಧ್ಯೇಯವಾಗಬೇಕು.
  • ಪ್ರತಿಯೊಬ್ಬ ಭಾರತೀಯನೂ ಧೈರ್ಯಶಾಲಿಗಳಾಗಬೇಕು. ಪುಕ್ಕಲುಗಳಾಗಬೇಡಿ
  • ಕನ್ನಡ ಭಾಷೆಯಲ್ಲಿ ಬರೆಯುವ, ಓದುವ ಮತ್ತು ತಿಳಿಯುವ ಅವಶ್ಯಕತೆ ಹಾಗೂ ಅಗತ್ಯ ಪ್ರತಿಯೊಬ್ಬ ಕರ್ನಾಟಕವಾಸಿಗೂ ಇದೆ. ರಾಜ್ಯದಲ್ಲಿ ವಾಸಿಸುವವರಿಗೆ ಪ್ರಾದೇಶಿಕ ಭಾಷಾ ಜ್ಞಾನ ಇರಬೇಕು
  • ಪ್ರತಿಯೊಬ್ಬ ಬಾಲಕ, ಬಾಲಕಿಗೂ ಅವರಿಗಿರುವ ಬುದ್ಧಿಶಕ್ತಿಯನ್ನು ಉಪಯೋಗಿಸಲು ವಿದ್ಯೆಯನ್ನು ಒದಗಿಸಲು ಪ್ರಯತ್ನಶೀಲರಾಗಬೇಕು. ವಿದ್ಯಾದಾನಕ್ಕೆ ಪ್ರೋತ್ಸಾಹವೂ ಬೇಕು

ಶುಭ ಹಾರೈಸಿದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮೂಡುನಡುಗೋಡು ಗ್ರಾಮವನ್ನು ಮದ್ಯವ್ಯಸನಮುಕ್ತವಾಗಿಸಲು ಹಾಗೂ ಆದರ್ಶ ಗ್ರಾಮವಾಗಿಸಲು ರಾಜ್ಯಪಾಲರ ಸೂಚನೆಯಂತೆ ಕಾರ್ಯಪ್ರವೃತ್ತರಾಗುತ್ತೇವೆ. ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಇದ್ದಾಗ ಅದನ್ನು ಉಳಿಸಬಹುದು ಎಂಬ ನಂಬಿಕೆಯನ್ನು ಶಾಲೆ ಮಾಡಿದೆ ಎಂದು ಶ್ಲಾಘಿಸಿದರು.

ವಿಧಾನಪರಿಷತ್ತು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಹೈಕೋರ್ಟು ನ್ಯಾಯವಾದಿ ರಾಜಶೇಖರ ಹಿಳಿಯೂರು ಮಾತನಾಡಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಶಾಲೆ ಉಳಿಸಿ ಬೆಳೆಸಿರಾಜ್ಯ ಸಮಿತಿ ಹಾಗೂ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಪ್ರಾಸ್ತಾವಿಕ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಡಿಡಿಪಿಐ ವೈ.ಶಿವರಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಪ್ರಮುಖರಾದ ಸೇಸಪ್ಪ ಕೋಟ್ಯಾನ್, ಗೋವಿಂದ ಪ್ರಭು, ಸುಲೋಚನಾ ಭಟ್, ಪ್ರಭಾಕರ ಪ್ರಭು ಸಹಿತ ಹಲವರು ಸಂದರ್ಭ ಉಪಸ್ಥಿತರಿದ್ದರು. ಪುರುಷೋತ್ತಮ ಅಂಚನ್ ವಂದಿಸಿದರು. ಶಿಕ್ಷಕಿ ಹಿಲ್ಡಾ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯಪಾಲ ವಜೂಭಾಯಿವಾಲಾ ಅವರು ಮೊದಲ ಬಾರಿಗೆ ಬಂಟ್ವಾಳಕ್ಕೆ ಆಗಮಿಸುತ್ತಿದ್ದು, ಪ್ರವಾಸಿ ಬಂಗ್ಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸ್ವಾಗತ ಕೋರಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ