“ನಮಸ್ಕಾರ ಮಾರಾಯ್ರೆ”
ಪೇಟೆಯ ಎದುರು ನಿಲ್ಲುವ ಟ್ಯಾಕ್ಸಿಗಳಲ್ಲಿ ಕುಳಿತುಕೊಳ್ಳುವ ಚಾಲಕರ ಪೈಕಿ ಆ ನಗುಮುಖದ ವ್ಯಕ್ತಿ ಹಾಗೆ ಹೇಳುವುದುಂಟು. ಇದು ಪ್ರತಿನಿತ್ಯದ ಕಾಯಕವಾದ ಕಾರಣ ಅಲ್ಲೇ ಬಸ್ಸಿಗೆಯೋ, ಇತರ ಕೆಲಸಕ್ಕೆಂದು ಹೋಗುವಾಗಲೋ ನಾನೂ ನಮಸ್ಕಾರ ಹೇಗಿದ್ದೀರಿ ಎಂಬ ಮಾಮೂಲಿ ಡೈಲಾಗ್ ಹೇಳುತ್ತೇನೆ. ಅವರು ಸುಮ್ಮನೆ ನಗುತ್ತಾರೆ. ಅಲ್ಲಿಗೆ ನಮ್ಮ ಸಂಭಾಷಣೆ ಖತಂ.
ಅಂದ ಹಾಗೆ ಈ ಸಂಭಾಷಣೆ ನಡೆದದ್ದು ಇಂದು ನಿನ್ನೆಯದಲ್ಲ. ಸುಮಾರು ಏಳೆಂಟು ವರ್ಷಗಳಾದವು. ಅಂದಿನ ಸರಕಾರ ಖಾಸಗಿ ಬಸ್ಸುಗ್ಗಳನ್ನು ನಿಲ್ಲಿಸುವ ಪ್ರಸ್ತಾಪ ಮುಂದಿಟ್ಟ ಕಾಲ. ಆಗ ಎಂದಾಗ ನಾನವರನ್ನು ಮಾತಿಗೆಳೆದೆ.
“ನಿಮ್ಮ ಚಾನ್ಸ್..ಇನ್ನು ಬಾಡಿಗೆ ಹೆಚ್ಹಾಗಬಹುದು”
’ಯಾರು ಹೇಳಿದ್ದು ನಿಮಗೆ’ ಎಂದರು ಅವರು. “ನಮ್ಮ ಬಾಡಿಗೆ, ವಹಿವಾಟು ಮಾಮೂಲಿಯಾಗೇ ಇರುತ್ತದೆ. ನನ್ನದು ಫಿಕ್ಸೆಡ್ ರೇಟ್. ಬೆಳಗ್ಗೆ 6ಕ್ಕೆಲ್ಲಾ ಟ್ಯಕ್ಸಿ ಸ್ಟೇಂಡ್ ನಲ್ಲಿ ಇರ್ತೇನೆ. ಏರ್ಪೋರ್ಟ್, ರೈಲ್ವೇ ಸ್ಟೇಶನ್ ಗೆಂದು ಬರುವವರು, ಜಾಗ ಅಳೆಯಲು ಬರುವ ವಕೀಲರು ಹೀಗೆ ನನ್ನದೇ ಆದ ಕೆಲವು ಪಾರ್ಟಿ ಇರ್ತದೆ. ಹೇಗೋ ಹೊಟ್ಟೆಪಾಡು ನಡೆಯುತ್ತದೆ. ಎಲ್ಲಾ ಉಳಿಸಿ, ದಿನಕ್ಕೆ 250 ರೂ ಆದರೆ ಪುಣ್ಯ”
ಹೀಗೆ ಮಾತನಾಡಿದ ಮೇಲೆ ಅವರು ತನ್ನ ಹೆಸರು ಹೇಳಿದರು. ಬಾಡಿಗೆ ಇದ್ದರೆ ಹೇಳಿ ಎಂದು ಸೇರಿಸಿದರು.
ಆಯ್ತು ಎಂದು ನಾನು ಹೊರಟೆ..
ಅದಾದ ಬಳಿಕ ನಮಸ್ಕಾರದಲ್ಲೇ ಮುಕ್ತಾಯ..
ಕೆಲವು ದಿನಗಳ ಬಳಿಕ ಎಂದಿನಂತೆ ದೊಡ್ಡ ಊರಿಗೆ ಹೋಗುವಾಗ ಕಟ್ಟೆಯೊಂದರ ಹತ್ತಿರ ನಜ್ಜುಗುಜ್ಜಾದ ಅಂಬಾಸಿಡರ್ ಕಾರು ಕಂಡಿತು. ಛೇ.. ಎಂದು ಮರುಕ ವ್ಯಕ್ತಪಡಿಸಿ ಅಫೀಸ್ ನ ಇತರ ವ್ಯವಹಾರದಲ್ಲಿ ಮುಳುಗಿದೆ. ಆದರೆ ರಾತ್ರಿ ಬಂದ ವರದಿ ಹೀಗಿತ್ತು.
ಅದಿರು ಲಾರಿ ಟೂರಿಸ್ಟ್ ಕಾರು ಮುಖಾಮುಖಿ, ಕಾರು ಚಾಲಕ ಸಾವು..
ಚಾಲಕನ ಹೆಸರು…..
ಬೆಳಗಿನ ಜಾವ ರಾಂಗ್ ಸೈಡ್ದ್ನಲ್ಲಿ ಬಂದ ಅದಿರು ಲಾರಿ ಚಾಲಕನ್ನನ್ನು ಬಲಿ ತೆಗೆದುಕೊಂಡಿತು..
ಸಿಂಗಲ್ ಕಾಲಂ ಸುದ್ದಿ ಯಲ್ಲಿ ಚಾಲಕನ ಬದುಕು ಕೊನೆಗೊಂಡಿತ್ತು.
ನಿಮಗಿದು ಬೋರ್ ಶಬ್ದಗಳು ಎನಿಸಬಹುದೇನೋ..ಆದರೆ ಪ್ರತಿ ಬಾರಿ ನಾನು ದೊಡ್ಡ ಊರು ಮತ್ತು ನನ್ನ ಪೇಟೆಗೆ ಹೋಗುವ ವೇಳೆ ಕಟ್ಟೆಯ ಬಳಿ ನನ್ನ ವಾಹನ ಹೋಗುವಾಗಲೆಲ್ಲಾ ಆ ಚಾಲಕ ನೆನಪಾಗುತ್ತಾರೆ. ಹೆಡ್ಲೈಟ್ ಡಿಮ್ ಮಾಡದ ಅತಿಕಾಯ ಲಾರಿಗಳೆಲ್ಲಾ ಯಮದೂತರಂತೆ ಕಾಡುತ್ತಾರೆ.
ಹಲವೆಡೆ ಹಿಂದೆ ಅಂಬಾಸೆಡರ್, ಈಗ ಬೇರೆ ಬೇರೆ ಕಾರುಗಳನ್ನು ತೆಗೆದುಕೊಂಡು ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ನಿಲ್ಲಿಸುವ ವಾಹನ ಚಾಲಕರ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ಕಮೆಂಟ್ ಇರುತ್ತದೆ. ಈ ಚಾಲಕ ಗತಿಸಿ ವರ್ಷಗಳೇ ಆದವು. ಇದೀಗ ಕೆಲ ರಸ್ತೆಗಳು ಚತುಷ್ಪಥವಾಗಿವೆ. ಬದುಕು ಬದಲಾಗಿದೆ. ಆದರೆ ದಿನದ ತುತ್ತಿಗೆ ದುಡಿಯುವವರ ಸಮಸ್ಯೆ ಹಾಗೇ ಇದೆ.
ಇದು ಟೂರಿಸ್ಟ್ ಚಾಲಕರೊಬ್ಬರದ್ದೇ ಮಾತಲ್ಲ. ನಿತ್ಯ ಕೂಲಿ ಕೆಲಸ ಮಾಡುವವರು, ಕಮೀಷನ್ ಬದುಕಿನಲ್ಲಿ ದುಡಿಯುವ ಅಸಂಘಟಿತರು ಹೀಗೆ ಸಮಸ್ತ ದುಡಿಯುವ ವರ್ಗಕ್ಕೆ ಗಟ್ಟಿದೇಹವೇ ಬಂಡವಾಳ. ಆರೋಗ್ಯ ಹಗದೆಟ್ಟರೆ, ಇಡೀ ಕುಟುಂಬ ತತ್ತರಿಸುತ್ತದೆ. ನೀವು ರಾತ್ರಿ ಪಾಳಿಯಲ್ಲಿ ಪತ್ರಿಕೆಗಳು ಪ್ರಿಂಟ್ ಆದ ಮೇಲೆ ಅವುಗಳ ಬಂಡಲ್ ಹೊತ್ತುಕೊಂಡು ಹೋಗುವ ವಾಹನ ಚಾಲಕರನ್ನು ನೋಡಿ. ವರ್ಷದಲ್ಲಿ ನಾಲ್ಕೇ ದಿನ ಅವರಿಗೆ ರಜೆ. ಉಳಿದ ರಾತ್ರಿಗಳನ್ನೆಲ್ಲ ಅವರು ನಿದ್ದೆಯಿಲ್ಲದೆ ಕಳೆಯಬೇಕು. ಹೀಗಿರುವಾಗ ವಾಹನಗಳಲ್ಲಿ ಸಂಚರಿಸುವ ಸಂದರ್ಭ ಯಾರಾದರೂ ಪಹರೆಯವರು ಅಡ್ಡ ಸಿಕ್ಕಿ, ಎಲ್ಲಿಂದ ಎಲ್ಲಿಗೆ ಎಂದು ವಿಚಾರಿಸಿ, ಪೇಪರ್ ಉಂಡಾ ಎಂದು ಕೇಳುತ್ತಾರೆ. ಕಚೇರಿಯಿಂದ ಲೆಕ್ಕದ್ದೇ ಪತ್ರಿಕೆಗಳೇನಾದರೂ ಬಂದರೆ ಸಿಡಿಮಿಡಿಗುಟ್ಟುತ್ತಾ ಕೊಡಬೇಕು. ರಸ್ತೆಯಲ್ಲಿ ಟೈಯರ್ ಪಂಕ್ಚರ್ ಆದರೆ ಟಾರ್ಚ್ ಪಕ್ಕದಲ್ಲೇ ಇಟ್ಟು ಚೇಂಜ್ ಮಾಡಬೇಕು. ಇವರಿಗೆಲ್ಲ ಡಿಸೆಂಬರ್ 31 ಬಂದರೆ ಹೆದರಿಕೆಯಾಗುತ್ತದೆ. ಯಾಕೆ ಗೊತ್ತೇ?
ಡಿಸೆಂಬರ್ 31ರ ಮಧ್ಯರಾತ್ರಿ 12ಕ್ಕೆ ಕೆಲವರು ಸುಮ್ಮನೆ ಕುಳಿತವರು ದಿಢೀರನೆ ಎದ್ದು ಕುಣಿಯುತ್ತಾರೆ. ಟಿ.ವಿ.ಸ್ಟೂಡಿಯೋಗಳಲ್ಲಿ ಆಂಕರ್ ಮತ್ತು ಅತಿಥಿಗಳೂ ಕುಪ್ಪಳಿಸುವುದುಂಟು. ಕೇಕುಗಳನ್ನು ಮೆತ್ತಿಕೊಳ್ಳುತ್ತಾರೆ. ಪಟಾಕಿಯನ್ನು ಲೆಕ್ಕವಿಲ್ಲದಷ್ಟು ಸುಡಲಾಗುತ್ತದೆ. ಇಷ್ಟೆಲ್ಲಾ ಆದರೆ ಹೋಗಲಿ ಎಂದುಕೊಳ್ಳಬಹುದು. ಆದರೆ ಕೆಲವರು ಪೊಲೀಸರ ಭಯವೂ ಇಲ್ಲದೆ ಬೀದಿಗಳಲ್ಲಿ ಬಾಟಲಿಗಳನ್ನು ಎತ್ತಿಕೊಂಡು ನರ್ತಿಸುತ್ತಾರೆ. ಅದಾದ ಮೇಲೆ ಮೋಟರ್ ಬೈಕುಗಳನ್ನೇರಿಕೊಂಡು ಹೆದ್ದಾರಿಯಲ್ಲಿ ರೊಯ್ಯನೆ ಸಾಗುತ್ತಾರೆ. ಇದರ ನೇರ ಪರಿಣಾಮ ಅನುಭವಿಸುವವರು ತಮ್ಮ ಪಾಡಿಗೆ ತಾವು ಮನೆಗೆ ಹೋಗುವವರು. ಪತ್ರಿಕಾ ಸಾಗಾಟದ ವಾಹನ, ಪತ್ರಿಕಾ ಕಚೇರಿಗಳಲ್ಲಿ ಕೆಲಸ ಮಾಡುವವರು ಮನೆಗೆ ತೆರಳುವಾಗ ಬಾಟಲಿಗಳ ಚೂರುಗಳು ರಸ್ತೆಯಲ್ಲೇನಾದರೂ ಇವೆಯೇ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಿಯೇ ಹೋಗಬೇಕು. ಇಲ್ಲದಿದ್ದರೆ ಟೈಯರ್ ಪಂಕ್ಚರ್!! ಒಂದಷ್ಟು ರೂಪಾಯಿ ಬೆವರಿನ ಹನಿಯಲ್ಲಿ ದುಡಿದ ಕೈಗಳಿಂದ ಜಾರುತ್ತವೆ. ಟೈಯರ್ ಚೇಂಜ್ ಮಾಡುವಾಗ ಮಸಿ ಮೆತ್ತುತ್ತದೆ. ಇದ್ಯಾವುದೂ ಪರಿವೆ ಇಲ್ಲದಂತೆ ಮದೋನ್ಮತ್ತರು ಹೊಸ ವರ್ಷ ಬಂತೆಂದು ಕೇಕೆ ಹಾಕಿ ಕುಣಿಯುತ್ತಾರೆ, ಹೌದು, 2019 ಬಂತು, ಏನೀಗ? ಎಂದು ಕೇಳಿದರೆ ಏನುಂಟು ಉತ್ತರ?