www.bantwalnews.com ಸಂಪಾದಕ: ಹರೀಶ ಮಾಂಬಾಡಿ
ಡಾ.ಪದ್ಮಾ ಸುಬ್ರಹ್ಮಣ್ಯಂ, ಸಿ.ವಿ.ಚಂದ್ರಶೇಖರ್, ರಾಧಿಕಾ ಶೆಟ್ಟಿ, ಧನಂಜಯನ್ಸ್, ಡಾ.ಸೌಂದರ್ಯ ಶ್ರೀವತ್ಸ, ಪಾರ್ಶ್ವನಾಥ ಉಪಾಧ್ಯಾಯ, ಮೀನಾಕ್ಷಿ ಶ್ರೀನಿವಾಸನ್, ಡಾ.ಸರೋಜ ವೈದ್ಯನಾಥನ್, ಶೀ ಲಕ್ಷ್ಮೀ ಗೋವರ್ಧನ್, ರಮಾ ವೈದ್ಯನಾಥನ್, ಪಿ.ಉನ್ನಿಕೃಷ್ಣನ್, ಟಿ.ಎಂ.ಕೃಷ್ಣ, ಶಂಕರ್ ಮಹಾದೇವನ್ ಚಿತ್ರಗಳೆಲ್ಲ ಒಟ್ಟಾಗಿ ಸಿಕ್ಕರೆ ಹೇಗಿರುತ್ತದೆ ?
ಈ ಕಲಾವಿದರೂ ಸೇರಿದಂತೆ ಸಾಂಸ್ಕೃತಿಕ ಲೋಕದ ಶ್ರೇಷ್ಠ ಕಲಾವಿದರು ಪ್ರದರ್ಶನ ನೀಡುತ್ತಿರುವ ಸಂದರ್ಭ ಪತ್ರಕರ್ತ, ಛಾಯಾಚಿತ್ರ ಕಲಾವಿದ ಶೇಣಿ ಮುರಳಿ ಕ್ಯಾಮರಾದಲ್ಲಿ ಸೆರೆಹಿಡಿದ ಚಿತ್ರಗಳ ಪ್ರದರ್ಶನದಲ್ಲಿ ಇವರೆಲ್ಲರನ್ನೂ ನೋಡುವ ಅವಕಾಶ ಕಲಾರಸಿಕರಿಗೆ ವರ್ಷಾಂತ್ಯದ ಶನಿವಾರದಲ್ಲಿ ನಡೆದ ಫೊಟೋ ಎಕ್ಸಿಬಿಷನ್ ನಲ್ಲಿ ಒದಗಿತು.
ವಿಶೇಷವೆಂದರೆ ಇವೆಲ್ಲವೂ ಕಪ್ಪು-ಬಿಳುಪು ಚಿತ್ರಗಳು. ಶೇಣಿ ಮುರಳಿ ಅವರಿಗೂ ಕಪ್ಪು ಬಿಳುಪು ಚಿತ್ರಗಳಲ್ಲಿ ಆಸಕ್ತಿ. ಹೀಗಾಗಿಯೇ ಅವರು ಶನಿವಾರ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ನಡೆಸಿದ ಕಪ್ಪು ಬಿಳುಪು ಕಲಾತ್ಮಕ ಛಾಯಾಚಿತ್ರಗಳ ಪ್ರದರ್ಶನ ಸಂಗೀತಂನಲ್ಲಿ ಸಂಗೀತ, ನೃತ್ಯ ಪರಿಣತರ ವಿವಿಧ ಭಾವ ಭಂಗಿಗಳು ಪ್ರಸ್ತುತಗೊಂಡವು.
ಬಿಬಿಸಿ ವನ್ಯಜೀವಿ -ಫೊಟೋಗ್ರಫಿ-2016 ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಛಾಯಾಚಿತ್ರ ಕಲಾವಿದ ಗಣೇಶ್ ಎಚ್.ಶಂಕರ್ ಪ್ರದರ್ಶನ ಉದ್ಘಾಟಿಸಿ, ಶುಭ ಹಾರೈಸಿದರು. ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ನರೇಂದ್ರ ಎಲ್.ನಾಯಕ್ ಮುಖ್ಯ ಅತಿಥಿಯಾಗಿದ್ದರು. ಸಿತಾರ್ ಕಲಾವಿದ ಉಸ್ತಾದ್ ರಫೀಕ್ ಖಾನ್, ಹಿರಿಯ ಚಿತ್ರ ಕಲಾವಿದ ಕೋಟಿ ಪ್ರಸಾದ್ ಆಳ್ವ, ವಿಜಯವಾಣಿ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ಸುರೇಂದ್ರ ಎಸ್.ವಾಗ್ಳೆ, ಛಾಯಾಚಿತ್ರ ಕಲಾವಿದ ಮಹೇಶ್ ತೇಜಸ್ವಿ ಅತಿಥಿಗಳಾಗಿದ್ದರು.