ಸಾರ್ವಜನಿಕರ ಕಲಾಭಿರುಚಿಯನ್ನು ಬೆಳೆಸುವಲ್ಲಿ ಕರಾವಳಿ ಕಲೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಆಶ್ರಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಬಿ.ಸಿ.ರೋಡಿನಲ್ಲಿ ನಡೆಯುತ್ತಿರುವ ಕರಾವಳಿ ಕಲೋತ್ಸವದ ಎಂಟನೇ ದಿನವಾದ ಶುಕ್ರವಾರ ರಾತ್ರಿಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರಾವಳಿ ಕಲೋತ್ಸವವನ್ನು ಇನ್ನೂ ಎರಡು ದಿನಗಳ ಕಾಲ ಮುಂದುವರಿಸಲು ಸಲಹೆ ನೀಡಿದ ಅವರು, ಜನರ ಪ್ರತಿಕ್ರಿಯೆಯು ಅದ್ಭುತವಾಗಿದ್ದು, ಇಂಥ ಕಾರ್ಯಕ್ರಮಗಳು ಬಾಂಧವ್ಯವನ್ನು ಬೆಸೆಯಲು ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ, ಕಲೋತ್ಸವದಂಥ ಕಾರ್ಯಕ್ರಮಗಳು ನಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭ ರಂಗಭೂಮಿಯ ಹಿರಿಯ ಕಲಾವಿದ ಪುತ್ತುಮೋನಿ ನಡಾಯಿ ಬಸ್ತಿಕೋಡಿ ಅವರನ್ನು ಸನ್ಮಾನಿಸಲಾಯಿತು. ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟ ಶಿವಧ್ವಜ್ ಆಗಮಿಸಿದ್ದರು. ಬಂಟ್ವಾಳ ಪೊಲೀಸ್ ವೃತ್ತನಿರೀಕ್ಷಕ ಟಿ.ಡಿ.ನಾಗರಾಜ್, ಕಸಾಪ ತಾಲೂಕು ಅಧ್ಯಕ್ಷ ಮೋಹನ ರಾವ್, ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ ಜೈನ್, ಚಿಣ್ಣರಲೋಕ ಮೋಕೆದ ಕಲಾವಿದೆರ್ ಸ್ಥಾಪಕ ಮೋಹನದಾಸ ಕೊಟ್ಟಾರಿ, ನರಿಕೊಂಬು ಗ್ರಾಮ ಪಂಚಾಯತ್ ಅಭಿವೃದ್ಧಿ ಅಕಾರಿ ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜಯಾನಂದ ಪೆರಾಜೆ ಸ್ವಾಗತಿಸಿದರು. ಲೋಕೇಶ ಸುವರ್ಣ ವಂದಿಸಿದರು. ರಾಧಾಕೃಷ್ಣ ಕುಲಾಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.