ಮಕ್ಕಳು ಶಿಸ್ತು ಸನ್ನಡತೆಗಳನ್ನು ಅಳವಡಿಸಿಕೊಳ್ಳಲು ಪೋಷಕರು ಅವಕಾಶ ಮಾಡಿಕೊಡಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಕರೇ ಮಾದರಿಯಾಗಿರುವ ಕಾರಣ ಶಿಕ್ಷಕರ ಪ್ರತೀ ನಡವಳಿಕೆಯೂ ಎಚ್ಚರಿಕೆಯಿಂದ ಕೂಡಿರಬೇಕು. ಸಚ್ಚಾರಿತ್ರ್ಯವುಳ್ಳ ಮಕ್ಕಳು ಸಮಾಜದ ಆಸ್ತಿಯಾಗುತ್ತಾರೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀ ಮಹಾವೀರ ಜೈನ್ ಇಚ್ಲಂಪಾಡಿ ಹೇಳಿದರು.
ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದ ಸಭಾ ಕಾರ್‍ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಫಲ ತುಂಬಿದ ಮರದ ಕೊಂಬೆ ಬಾಗುವಂತೆ ಬೆಳೆದಂತೆಲ್ಲಾ ಮಕ್ಕಳಿಗೆ ಬಾಗುವುದನ್ನು ಕಲಿಸಬೇಕು. ಗುರು ಹಿರಿಯರಿಗೆ ಬಾಗಿ ನಡೆಯುವುದನ್ನು ಕಲಿಸಿದರೆ, ಕಲಿತ ವಿದ್ಯೆಯು ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಶಾಲಾ ಸಂಚಾಲಕ ಭಾಮಿ ವಿಠಲ್ ದಾಸ್ ಶೆಣೈ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲೆ ರಮಾಶಂಕರ್ ಸಿ ವಾರ್ಷಿಕ ವರದಿ ವಾಚನ ಮಾಡಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಎಸ್.ವಿ.ಎಸ್ ವಿದ್ಯಾವರ್ಧಕ ಸಂಘದ ಸದಸ್ಯರಾದ ರವಿದಾಸ್ ಪೈ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕ ತರುಣ್ ಹೊಳ್ಳ ಮತ್ತು ನಾಯಕಿ ಅಪೂರ್ವ ನಾಯಕ್ ಕಾರ್‍ಯಕ್ರಮ ನಿರ್ವಹಿಸಿದರು.
ಶಿಕ್ಷಕಿ ಸುರೇಖಾ ಎಸ್ ರೈ ವಂದಿಸಿದರು. ಜಾನಪದ ಕೇಂದ್ರಿತವಾಗಿದ್ದ ಹಲವು ಸಾಂಸ್ಕೃತಿಕ ಕಾರ್‍ಯಕ್ರಮಗಳು ಜರುಗಿದವು.