ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮ್ಯಾಟ್ ಕಬಡ್ಡಿ ಪಂದ್ಯಾಟ ಚಾಂಪಿಯನ್ ಶಿಪ್ 2018 ಕ್ರೀಡಾಕೂಟಕ್ಕೆ ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಬದಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಂಗಳವಾರ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ಕಬಡ್ಡಿ ಪಂದ್ಯಾಟಗಳು ತಾಲೂಕಿನಲ್ಲಿ ಅನೇಕ ನಡೆಯುತ್ತಿದ್ದು ಈ ಕೂಟದ ಮೂಲಕ ಅಧಿಕೃತವಾಗಿ ಅಮೆಚೂರು ಕಬಡ್ಡಿ ಅಸೋಸಿಯೇಶನ್ ನೇತೃತ್ವದಲ್ಲಿ ಎಲ್ಲ ಕ್ರೀಡಾಳುಗಳೂ ಒಟ್ಟಾಗಿ ಆಡುತ್ತಿರುವುದು ಸಂತೋಷದ ವಿಷಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ತಾಲೂಕು ಅಧ್ಯಕ್ಷ ಬೇಬಿ ಕುಂದರ್, ತಾಲೂಕು ಮಟ್ಟದಲ್ಲಿ ಸುಮಾರು 34 ತಂಡಗಳು ಈ ಕೂಟಕ್ಕೆ ನೋಂದಾವಣಿಯಾಗಿದ್ದು, ಎಲ್ಲ ಕ್ರೀಡಾಳುಗಳ ಹಿತರಕ್ಷಣೆಗೆ ಎಸೋಸಿಯೇಶನ್ ಬದ್ಧವಾಗಿದೆ. ಕ್ರೀಡಾಳುಗಳು ಎಸೋಸಿಯೇಷನ್ ಷರತ್ತುಗಳಿಗೆ ಅನ್ವಯವಾಗಿ ನಡೆದುಕೊಂಡು, ಪಂದ್ಯದ ಘನತೆ ಕಾಪಾಡಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಂಜುನಾಥ ಆಚಾರ್ಯ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪೋಷಕ ಜಿ.ಮಹಮ್ಮದ್ ಹನೀಫ್ ಗೋಳ್ತಮಜಲು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಮೆಚಚೂರ್ ಕಬಡ್ಡಿ ಎಸೋಸಿಯೇಶನ್ ಕಾರ್ಯಾಧ್ಯಕ್ಷ ಪುಷ್ಪರಾಜ ಚೌಟ, ಬಂಟ್ವಾಳ ಆರಕ್ಷಕ ವೃತ್ತನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ ಮೇರಾವು, ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಫಾರೂಕ್ ಬಂಟ್ವಾಳ, ತೀರ್ಪುಗಾರ ಸುರೇಶ್ ನರಿಕೊಂಬು ಉಪಸ್ಥಿತರಿದ್ದರು. ಪದಾಧಿಕಾರಿ ಚಂದ್ರಶೇಖರ ಕರ್ಣ ವಂದಿಸಿದರು. ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.