ಕಲ್ಲಡ್ಕ

ಬರಿಮಾರು ಸಂತ ಜೋಸೆಫ್ ಚರ್ಚ್ ಆಶ್ರಯದಲ್ಲಿ ಸೌಹಾರ್ದ ಕ್ರಿಸ್ಮಸ್-2018

ಜಾಹೀರಾತು

ಏಸು ಸ್ವಾಮಿಯ ಸಂದೇಶಗಳು ಕೇವಲ ಕ್ರೈಸ್ತರಿಗೆ ಮಾತ್ರ ಸೀಮಿತವಾಗಿಲ್ಲ, ಅದನ್ನು ಎಲ್ಲಾ ಸಮುದಾಯಕ್ಕೆ ತಲುಪಿಸುವ ಜವಬ್ದಾರಿ ಕ್ರೈಸ್ತ ಸಮುದಾಯದವರ ಮೇಲಿದೆ ಎಂದು ಪುತ್ತೂರಿನ ಸಿರೋ ಮಲಂಕರ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಹೇಳಿದರು.

ಬರಿಮಾರು ಸಂತ ಜೋಸೆಫರ ದೇವಾಲಯದ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಾಣಿಯ ಗಾಂಧಿ ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ಸೌಹಾರ್ದ ಕ್ರಿಸ್ಮಸ್ -2018 ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಪ್ರತಿಯೊಂದು ಧರ್ಮವೂ ಅದರದ್ದೇ ಆದ ಆಚಾರ ವಿಚಾರವನ್ನು ಹೊಂದಿದ್ದು, ಇತರ ಧರ್ಮವನ್ನು ಗೌರವಿಸುವುದೇ ನಿಜವಾದ ಧರ್ಮ ಎಂದರು.

ಶಾಂತಿಯ ದಾಹ ಎಲ್ಲೆಡೆ ಕಾಣಿಸುತ್ತಿದ್ದು, ಇಂತಹಾ ಸಂದರ್ಭದಲ್ಲಿ ಮಹಾತ್ಮಾಗಾಂಧಿಯ ಅಹಿಂಸಾ ಮಾರ್ಗ ನಮಗೆ ಮಾರ್ಗದರ್ಶನವಾಗಲಿ , ಪರಸ್ಪರ ಸೌಹಾರ್ದದ ಜೊತೆಗೆ ಸಮಾಜದಲ್ಲಿ ಸದಾ ಸಾಮರಸ್ಯ ನೆಲೆಯಾಗಲಿ ಎಂದರು. ಕನ್ಯಾನ ಬಾಳೆಕೋಡಿ ಶ್ರೀ ಶಿಲಾಂಜನ ಮಠದ ಡಾ.ಶಶಿಕಾಂತ ಮಣಿ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಭಾರತ ಇಡೀ ವಿಶ್ವಕ್ಕೆ ಒಳ್ಳೆಯ ಸಂದೇಶ ನೀಡುತ್ತಿದೆ.ಮನಸ್ಸಿನೊಳಗಿನ ಒಳಿತು ಮತ್ತು ಕೆಡುಕಿನ ವಿಚಾರಗಳು ಜೀವನವನ್ನು ನಿರ್ಧರಿಸುತ್ತದೆ ಎಂದ ಅವರು, ಮಾತೆಯರು ಮೌನ ಮುರಿಯಬೇಕು, ಜೊತೆಗೆ ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವ ಕಾರ್ಯ ಎಲ್ಲಾ ಧರ್ಮಗಳಲ್ಲಿಯೂ ಮಾತೆಯರಿಂದ ನಡೆಯಬೇಕು ಎಂದರು. ಭಾರತ ಮಾತೆಯ ನಡುವೆ ಜಾತಿ ಧರ್ಮದ ಗೆರೆಯನ್ನು ,ಕಲಹದ ಬರೆಯನ್ನೂ ಎಳೆದು ದ್ರೋಹ ಬಗೆಯುತ್ತಿದ್ದೇವೆ, ಇದು ಸರಿಯಲ್ಲ ಎಂದರು.

ಮುಲ್ಕಿ ಕೇಂದ್ರ ಶಫಿ ಜುಮ್ಮಾ ಮಸೀದಿಯ ಖತೀಬರಾದ ಎಸ್.ಬಿ.ಮಹಮ್ಮದ್ ದಾರಿಮಿ ಕ್ರಿಸ್ಮಸ್ ಸಂದೇಶ ನೀಡಿ ಮಾತನಾಡಿ, ಈ ವೇದಿಕೆಯಲ್ಲಿ ಮೂರುಮಂದಿ ಧರ್ಮಗುರುಗಳು ಒಟ್ಟಾಗಿರುವುದೇ ನಿಜವಾದ ಸೌಹಾರ್ದದ ಸಂದೇಶ ಎಂದರು. ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡವರಿಂದ, ರಾಜಕೀಯ ಹಿತಾಸಕ್ತಿ ಉಳ್ಳವರಿಂದ ಸಮಾಜದಲ್ಲಿ ಕೆಟ್ಟ ಘಟನೆಗಳು ನಡೆಯುತ್ತಿದೆ ಎಂದರು. ದೊಡ್ಡ ದೊಡ್ಡ ದೇವಸ್ಥಾನ, ಮಸೀದಿಗಳನ್ನು ಕಟ್ಟುವುದಕ್ಕಿಂತ ಇಂತಹಾ ಸೌಹಾರ್ದದ ಕಾರ್ಯಕ್ರಮಗಳು ನಿಜವಾದ ಮಾನವರನ್ನು ನಿರ್ಮಾಣ ಮಾಡುತ್ತದೆ ಎಂದರು.

ಬೊರಿಮಾರ್ ಸಂತ ಜೋಸೆಫರ ದೇವಾಲಯದ ಧರ್ಮಗುರು ಫಾದರ್ ಗ್ರೆಗರಿ ಪಿರೇರಾ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಎಸ್.ಶೆಟ್ಟಿ , ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಸಿಕ್ವೇರಾ , ಅಸ್ಸಾಂ ನ ಧರ್ಮಗುರು ಫೆಲಿಕ್ಸ್ ಪಿಂಟೋ ವೇದಿಕೆಯಲ್ಲಿದ್ದರು.

ಇದೇ ಸಂದರ್ಭ ಚಾಪರ್ಕ ನಾಟಕ ತಂಡದ ಮುಖ್ಯಸ್ಥ ದೇವದಾಸ್ ಕಾಪಿಕಾಡ್ ಹಾಗೂ ಕಾರ್ಯಕ್ರಮದ ಪೋಷಕರಾದ ಬೆನೆಡಿಕ್ಟ್ ಪಿಂಟೋ ರವರ ಪರವಾಗಿ,ಅವರ ತಾಯಿ ಶ್ರೀಮತಿ ಮೆರ್ಸಿನ್ ಪಿಂಟೋ ರವರನ್ನು ಸನ್ಮಾನಿಸಲಾಯಿತು.
ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೋಶನ್ ಬೊನಿಫಾಸ್ ಮಾರ್ಟಿಸ್ ಸ್ವಾಗತಿಸಿದರು. ಬಿ.ರಾಮಚಂದ್ರ ರಾವ್ ವಂದಿಸಿದರು. ಕ್ಯಾಂಡಲ್ ಉರಿಸಿ, ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಆಚರಣೆ ಮಾಡಲಾಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.