ರಾಯಚೂರಿನ ಮಾನ್ವಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಾಟೀಲ್ ಅವರ ಹತ್ಯೆಯನ್ನು ಖಂಡಿಸಿ ಬಂಟ್ವಾಳ ತಾಲೂಕು ಕಂದಾಯ ನೌಕರರ ಸಂಘ, ತಾಲೂಕು ಮಟ್ಟದ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಹಾಗೂ ತಾಲೂಕು ಗ್ರಾಮ ಸಹಾಯಕರ ಸಂಘದ ವತಿಯಿಂದ ಬಂಟ್ವಾಳ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಸೋಮವಾರ ಕೈಗೆ ಕಪ್ಪುಪಟ್ಟಿ ಕಟ್ಟಿ ಪ್ರತಿಭಟನೆ ನಡೆಯಿತು.
ಅಕ್ರಮ ಮರಳುಗಾರಿಕೆಯನ್ನು ತಡೆಯಲು ಯತ್ನಿಸಿದ ವೇಳೆ ಕರ್ತವ್ಯನಿರತರಾಗಿದ್ದ ಸಾಹೇಬ್ ಪಾಟೀಲ್ ಅವರ ಮೇಲೆ ಲಾರಿ ಹರಿಸಿ ಹತ್ಯೆ ಮಾಡಲಾಗಿದೆ. ಇದನ್ನು ಸರಕಾರ ಘೋರ ಘಟನೆ ಎಂದು ಪರಿಗಣಿಸಿ, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳಬೇಕಾಗಿದೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸುವಂತೆ ಜಿಲ್ಲಾ ಕಂದಾಯ ನೌಕರರ ಕೋಶಾಧಿಕಾರಿ ಪ್ರಸನ್ನ ಪಕ್ಕಳ ಅವರು ಆಗ್ರಹಿಸಿದರು.
ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಮಾತನಾಡಿ, ಕರ್ತವ್ಯನಿರತ ಅಧಿಕಾರಿ ಮತ್ತು ಸಿಬಂದಿಗೆ ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆಯನ್ನು ಒದಗಿಸುವ ಕೆಲಸ ಸರಕಾರ ಮಾಡಬೇಕಾಗಿದೆ ಎಂದ ಅವರು ಒತ್ತಾಯಿಸಿದರು.
ಬಂಟ್ವಾಳ ಉಪತಹಶೀಲ್ದಾರ್ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಗ್ರಾಮಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ತೌಫೀಕ್, ಉಪತಹಶೀಲ್ದಾರ್ ರವಿಶಂಕರ್, ಪ್ರಭಾರ ಉಪತಹಶೀಲ್ದಾರ್ ಸೀತಾರಾಮ, ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಆಹಾರ ಶಾಖೆಯ ಆಹಾರ ನಿರೀಕ್ಷಕ ಶ್ರೀನಿವಾಸ, ತಾಲೂಕು ಕಚೇರಿಯ ಸಿಬ್ಬಂದಿ ವರ್ಗ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಭಾಗವಹಿಸಿದ್ದರು.