4 ಕೋಟಿ ಅನುದಾನದಲ್ಲಿ ನಡೆಯುತ್ತಿರುವ ಕಲ್ಲಡ್ಕ–ಮಂಗಳಪದವು ರಾಜ್ಯ ಹೆದ್ದಾರಿ ಕಾಮಗಾರಿ ಹಾಗೂ ಇತ್ತೀಚೆಗೆ ಅಭಿವೃದ್ಧಿ ಹೊಂದಿರುವ ಅಪಾಯಕಾರಿ ಮಜ್ಜೋನಿ ರಸ್ತೆಯನ್ನು ಮಾಜಿ ಸಚಿವ ಬಿ ರಮಾನಾಥ ರೈ ವೀಕ್ಷಿಸಿದರು.
ಕಳೆದ ಬಾರಿ ರಾಜ್ಯ ಸರ್ಕಾರದಿಂದ ಕಲ್ಲಡ್ಕ–ಮಂಗಳಪದವು ರಸ್ತೆಯ ವಿಸ್ತರಣೆಗೆ ಅಪೆಂಡಿಕ್ಸ್ ಇ ಯೋಜನೆ ಮೂಲಕ ನಾಲ್ಕು ಕೋಟಿ ರೂ. ಅನುದಾನ ಬಿಡುಗಡೆಗೊಂಡಿತ್ತು. ಅವುಗಳ ಪೈಕಿ ಹಲವು ಅಪಘಾತಗಳಿಗೆ ಕಾರಣವಾಗುತ್ತಿದ್ದ ಮಜ್ಜೋನಿ ರಸ್ತೆ ಒಂದು ಕೋಟಿ ಅನುದಾನದಲ್ಲಿ ವಿಸ್ತರಣೆ ಹಾಗೂ ಡಾಂಬರೀಕರಣಗೊಂಡು ಅಭಿವೃದ್ಧಿ ಹೊಂದಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಮಾತನಾಡಿದ ಬಿ. ರಮಾನಾಥ ರೈ ಅವರು ಕಳೆದ ಬಾರಿ ನನ್ನ ಅವಧಿಯಲ್ಲಿ ನಾಲ್ಕು ಕೋಟಿ ಬಿಡುಗಡೆ ಮಾಡಲಾಗಿತ್ತು. ಅವುಗಳ ಪೈಕಿ ಮಜ್ಜೋನಿ ಅಪಾಯ ತಿರುವಿಗೆ ಒಂದು ಕೋಟಿ ಮೀಸಲಿಡಲಾಗಿತ್ತು. ಇಲ್ಲಿರುವ ಬಂಡೆಗಳಿಂದ ಕಿರಿದಾದ ರಸ್ತೆಯಿಂದ ಸಾರ್ವಜನಿಕರಿಗೆ ತೊಂದರೆಯಗುತ್ತಿತ್ತು. ಬಂಡೆಗಳನ್ನು ಒಡೆದು ಬದಿಗೆ ಕಾಂಕ್ರಿಟ್ ಹಾಕಿ, ಡಾಂಬರೀಕರಣ ನಡೆಸಲಾಗಿದೆ. ಈ ಕಷ್ಟಕರ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಶೀಘ್ರದಲ್ಲಿ ಮಾಡಿ ಮುಗಿಸಿದೆ. ಕಳೆದ ಬಾರಿ ಹಲವು ಜಿಲ್ಲಾ ಪಂಚಾಯಿತಿ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಮೂಲಕ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಮಂಜುಳಾ ಮಾಧವ ಮಾವೆ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ವೀರಕಂಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ಅಬ್ಬಾಸ್ ಕೆಲಿಂಜ, ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಿಕ್ ಸರಾವು, ಅಬ್ದುಲ್ಲ ಕುಕ್ಕಿಲ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಾಧವ ಮಾವೆ, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ಅನಂತಾಡಿ, ಎಪಿಎಂಸಿ ಸದಸ್ಯ ಚಂದ್ರಶೇಖರ ರೈ, ವೀರಕಂಬ ಗ್ರಾಮ ಪಂಚಾಯಿತಿ ಸದಸ್ಯರಾದ ಸೀಲಾ ವೇಗಸ್, ದೇವದಾಸ್, ನಿಶಾಂತ್ ರೈ, ಉಬೈದ್ ಮಂಗಳಪದವು, ಸ್ಥಳೀಯರಾದ ಹರೀಶ್ ಕಲ್ಮಲೆ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.