ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ, ಕಲ್ಲಡ್ಕ–ವೀರಕಂಭ ಮಧ್ಯೆ ರಸ್ತೆ ಸದೃಢ
ಕಲ್ಲಡ್ಕದಿಂದ ಕೇರಳದ ಚೆರ್ಕಳವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಗಲಗೊಳಿಸಲು ಇನ್ನೂ ಮುಹೂರ್ತ ಕೂಡಿಬಂದಿಲ್ಲ. ಅಲ್ಲಿಯವರೆಗೆ ಇದರ ನಿರ್ವಹಣೆ ಮಾಡುವ ಹೊಣೆ ಹೊತ್ತಿರುವ ಲೋಕೋಪಯೋಗಿ ಇಲಾಖೆ ಗಂಭೀರ ಸಮಸ್ಯೆ ಇದ್ದ ಜಾಗವನ್ನು ಅಪಾಯಮುಕ್ತಗೊಳಿಸಲು ಹೊರಟಿದೆ.
ಮಾಜಿ ಸಚಿವ ರಮಾನಾಥ ರೈ ಅವರು ಕಳೆದ ವರ್ಷ ಕೋಡಪದವು ಸಮೀಪ ಮಜ್ಜೋಣಿ ಎಂಬಲ್ಲಿ ತೀರಾ ಅಪಾಯದ ಸ್ಥಿತಿಯಲ್ಲಿ ಪ್ರಾಣಬಲಿಗೆ ಕಾದಿರುವಂತಿದ್ದ ರಸ್ತೆಯ ದುರಸ್ತಿಗೆ 1 ಕೋಟಿ ರೂ ಮತ್ತು ವೀರಕಂಭ ಕಲ್ಲಡ್ಕ ಮಧ್ಯೆ 2.5 ಕಿ.ಮೀ. ದೂರದ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ ಅನುದಾನವನ್ನು ಅಪೆಂಡಿಕ್ಸ್ ’ಇ’ ಮೂಲಕ ನಿಗದಿಗೊಳಿಸಿದ್ದರು. ಲೋಕೋಪಯೋಗಿ ಇಲಾಖೆ ಈ ಸಂಬಂಧ ಕೆಲಸಕಾರ್ಯಗಳನ್ನು ಆರಂಭಿಸಿತ್ತು.
ಇದೀಗ ಹಲವು ಅಪಘಾತಗಳ ಮೂಲಕ ಹಲವು ಪ್ರಾಣಗಳನ್ನು ಬಲಿ ತೆಗೆದುಕೊಂಡ ಕಲ್ಲಡ್ಕ–ಕಾಂಞಂಗಾಡ್ ಹೆದ್ದಾರಿಯ ಮಜ್ಜೋಣಿಯಲ್ಲಿ ಬಂಡೆಗಳನ್ನು ಒಡೆದು ರಸ್ತೆ ವಿಸ್ತರಣೆ ಮಾಡುವ ಮೂಲಕ ರಸ್ತೆ ಸದೃಢವಾಗಿದೆ.
ಕಲ್ಲಡ್ಕ–ಕಾಂಞಂಗಾಡ್ ಅಂತರಾಜ್ಯ ಹೆದ್ದಾರಿಯಲ್ಲಿ ಬರುವ ವಿಟ್ಲದಿಂದ ೬ ಕಿ.ಮೀ ದೂರದಲ್ಲಿರುವ ಮಜ್ಜೋನಿ ಎಂಬಲ್ಲಿ ಇರುವ ಕಿರಿದಾದ ರಸ್ತೆಯಲ್ಲಿ ಸುಗಮವಾಗಿ ವಾಹನಗಳು ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ಬದಿಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಕಾಡು ಅದರ ಸಮೀಪ ಬೃಹತಾಕಾರದ ಬಂಡೆಗಳು ಇನ್ನೊಂದು ಬದಿಯಲ್ಲಿ ಅಪಾಯಕಾರಿ ಪ್ರಪಾತ ಅದರ ಕೆಳಗಡೆ ಮನೆಗಳಿವೆ. ಇದರಿಂದ ರಸ್ತೆ ಕಿರಿದಾಗಿದ್ದು, ಏಕಮುಖವಾಗಿ ಸಂಚಾರ ಮಾಡಲಷ್ಟೇ ಸಾಧ್ಯವಾಗುತ್ತಿತ್ತು.
ಬದಲಾದ ರಸ್ತೆ:
ರಸ್ತೆ ಅಗಲಗೊಳಿಸಿ, ಗಟ್ಟಿಗೊಳಿಸುವ ಕಾರ್ಯ ಅಷ್ಟೊಂದು ಸುಲಭವಾಗಲಿಲ್ಲ. ಹೀಗಾಗಿ ಮೊದಲಿಗೆ ಬಂಡೆಗಳನ್ನು ಒಡೆಯುವ ಕಾಮಗಾರಿ ಪ್ರಾರಂಭಿಸಲಾಗಿತ್ತು. ಬಂಡೆ ಹೊಡೆದು ಅಲ್ಲಿ ಕಾಂಕ್ರೀಟ್ ಹಾಕಲಾಗಿತ್ತು. ಇದರ ನಡುವೆ ವಿಧಾನ ಸಭೆ ಚುನಾವಣೆ ಘೋಷಣೆಯಾಯಿತು. ಇದರಿಂದ ಕಾಮಗಾರಿ ಸ್ಥಗಿತಗೊಂಡಿತು. ಚುನಾವಣೆ ಮುಗಿಯುತ್ತಿದ್ದಂತೆ ಮಳೆ ಪ್ರಾರಂಭಗೊಂಡಿದ್ದರಿಂದ ಕಾಮಗಾರಿಗೆ ಅಡ್ಡಿಯಾಯಿತು. ಮಳೆ ನಿಲ್ಲುತ್ತಿದ್ದಂತೆ ಕಾಮಗಾರಿಗೆ ವೇಗ ದೊರಕಿತು. ರಸ್ತೆ ಬದಿಯ ೨ಮೀ ಅಗಲಗೊಳಿಸಿ ವಿಸ್ತರಿಸಲಾಯಿತು. ೫ ಮೀಟರ್ ಉದ್ದದ ವರೆಗೆ ಡಾಂಬರೀಕರಣ ನಡೆಸಲಾಯಿತು. ಇದೀಗ ಅಭಿವೃದ್ಧಿಗೊಂಡ ರಸ್ತೆ ಸುಗಮ ಸಂಚಾರಕ್ಕೆ ಸಿದ್ಧಗೊಂಡಿದೆ.
ಕಳೆದ ವರ್ಷ ಬಜೆಟ್ ನ ಅನುಬಂಧ ’ಇ’ಯಲ್ಲಿ ಈ ರಸ್ತೆಗೆ 1 ಕೋಟಿ ರೂ ಒದಗಿಸಲಾಗಿತ್ತು. ಬಂಡೆ ಒಡೆದು ತೆಗೆದು ರಸ್ತೆ ಲೆವೆಲ್ ಗಿಂತ ಬಂಡೆಯನ್ನು ತಗ್ಗಿಸಿ ೮ ಇಂಚು ಕಾಂಕ್ರೀಟ್ ಹಾಕಲಾಗಿದೆ. ರಾತ್ರಿ ಪ್ರಯಾಣಿಕರಿಗೆ ಸುರಕ್ಷತೆಗಾಗಿ ಕ್ಯಾಟ್ ಐ ಹಾಕಲಾಗುವುದು. ವೀರಕಂಭ – ಕಲ್ಲಡ್ಕ ಮಧ್ಯೆ 2.5 ಕಿ.ಮೀ. ರಸ್ತೆ ಅಗಲೀಕರಣವನ್ನೂ ನಡೆಸಲಾಗುವುದು ಎನ್ನುತ್ತಾರೆ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಉಮೇಶ್ ಭಟ್