ಇರಾ ಗ್ರಾಮದ ಕುಕ್ಕಾಜೆ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಅಖಂಡ ಭಜನಾ ಸಪ್ತಾಹ ಡಿ.22ರಂದು ಶನಿವಾರ ಬೆಳಗ್ಗೆ ಆರಂಭಗೊಂಡಿತು. ಬೆಳಗ್ಗೆ ಶ್ರೀ ಮಹಾಗಣಪತಿ ಹೋಮದ ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಸೂರ್ಯೋದಯಕ್ಕೆಸರಿಯಾಗಿ ಭಜನಾ ಸಪ್ತಾಹವನ್ನು ಆರಂಭಿಸಲಾಯಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಕನ್ಯಾನ ಕಣಿಯೂರಿನ ಶ್ರೀ ಮಹಾಬಲ ಸ್ವಾಮೀಜಿ ಭಾಗವಹಿಸಿ ಆಶೀರ್ಚನ ನೀಡಿದರು. ಭಜನೆಯಂಥ ಕಾರ್ಯಕ್ರಮಗಳು ನಮ್ಮಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮುನ್ನಡೆಸುವ ಚೈತನ್ಯ ಒದಗಿಸುತ್ತವೆ ಎಂದ ಅವರು ಶ್ರೀ ಲಕ್ಷ್ಮೀನರಸಿಂಹ ಸನ್ನಿಧಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೂ ಕಣಿಯೂರು ಕ್ಷೇತ್ರಕ್ಕೂ ಇರುವ ನಂಟನ್ನು ಪ್ರಸ್ತಾಪಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಖಂಡ ಭಜನಾ ಸಪ್ತಾಹ ಸಮಿತಿಯ ಸಂಚಾಲಕ ಕೈಯೂರು ನಾರಾಯಣ ಭಟ್ ದೇವಸ್ಥಾನದ ಕುರಿತು ವಿವರಿಸಿ, ಭಜನಾ ಕಾರ್ಯಕ್ರಮಕ್ಕೆ ಒಟ್ಟು 82 ತಂಡಗಳು ನೋಂದಾಯಿಸಲ್ಪಟ್ಟಿದ್ದು, ಇದು ಕಾರ್ಯಕರ್ತರ ಪರಿಶ್ರಮ ಮತ್ತು ದೈವಕೃಪೆಯಿಂದಾಗಿದೆ ಎಂದರು.
ಈ ಸಂದರ್ಭ ಅತಿಥಿಗಳಾಗಿ ಮಾತನಾಡಿದ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಧಾರ್ಮಿಕ ಆಚರಣೆಯಲ್ಲಿ ದೇವರಿಗೆ ಮೊರೆ ಹೋಗುವ ಅತ್ಯಂತ ಸುಲಭ ವಿಧಾನವೆಂದರೆ ಭಜನೆ. ಇದು ಮಾನಸಿಕ ನೆಮ್ಮದಿಯ ಜೊತೆಗೆ ಸಾಮಾಜಿಕ ಒಗ್ಗಟ್ಟು ಮತ್ತು ಸಂಸ್ಕಾರವನ್ನು ಒದಗಿಸುತ್ತದೆ ಎಂದರು.
ವೇದಿಕೆಯಲ್ಲಿ ಅಖಂಡ ಭಜನಾ ಸಮಿತಿಯ ಗೌರವಾಧ್ಯಕ್ಷ ವಿಠಲ ಪ್ರಭು ಪತ್ತುಮುಡಿ, ಟ್ರಸ್ಟಿಗಳಾದ ರಮೇಶ್ ಪೂಜಾರಿ ಕುಕ್ಕಾಜೆ ಉಪಸ್ಥಿತರಿದ್ದರು. ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ಕುಕ್ಕಾಜೆಬೈಲು ಪ್ರಾರ್ಥಿಸಿ, ವಂದಿಸಿದರು. ಸಂಜೀತ್ ಪತ್ತುಮುಡಿ ಕಾರ್ಯಕ್ರಮ ನಿರೂಪಿಸಿದರು.