ಭರತನಾಟ್ಯ, ಕರ್ನಾಟಕ ಸಂಗೀತದಂತಹ ಶಾಸ್ತ್ರೀಯ ಪ್ರಕಾರಗಳು ವಿದ್ಯಾರ್ಥಿಗಳಲ್ಲಿ ಸಂಸ್ಕಾರವನ್ನು ಮೂಡಿಸುತ್ತದೆ. ಏಕಾಗ್ರತೆ, ಜ್ಞಾನವನ್ನು ಬೆಳೆಸಿ ಅವರನ್ನು ವಿಚಾರವಂತರನ್ನಾಗಿ ಮಾಡಿ ಪ್ರಾಚೀನ ಪರಂಪರೆಗಳ ಬಗ್ಗೆ ಅರಿವು ನೀಡುತ್ತದೆ. ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಇಂದಿನ ಮಕ್ಕಳು ನಿರ್ದಿಷ್ಟ ಸಂಗೀತ-ನೃತ್ಯ ಪ್ರಕಾರಗಳ ಬಗ್ಗೆ ತಿಳಿವಳಿಕೆ ಬೆಳೆಸಿಕೊಳ್ಳುತ್ತಾರೆ ಎಂದು ಸಂಗೀತ ವಿದುಷಿ ಸುಚಿತ್ರಾ ಹೊಳ್ಳ ಹೇಳಿದರು.
ಬಂಟ್ವಾಳ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಸ್ತ್ರೀಯ ಸಂಗೀತ-ನೃತ್ಯ ಕಾರ್‍ಯಕ್ರಮ ಸಂಸ್ಕೃತಿ ಹಾಗೂ ವಾರ್ಷಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಶಾಲಾ ಸಂಚಾಲಕ ಭಾಮೀ ವಿಠಲ್‌ದಾಸ್ ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಪ್ರಾಂಶುಪಾಲೆ ರಮಾಶಂಕರ್ ಸಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಶಾಲಾ ಸಮಿತಿಯ ಸದಸ್ಯ ಡಾ.ಮಹೇಶ್ ಭಟ್ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಾಸ್ತ್ರೀಯ ಹಾಡುಗಾರಿಕೆ, ಕೊಳಲು, ವಯೊಲಿನ್, ಚೆಂಡೆವಾದನ, ಭರತನಾಟ್ಯ ಹಾಗೂ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನ ನೀಡಿದರು. ಪಠ್ಯೇತರ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 9ನೇ ತರಗತಿಯ ಲೀನಾ ಹಾಗೂ ಗಣೇಶ್ ಕಾರ್ಯಕ್ರಮ ನಿರ್ವಹಿಸಿ ಆಕಾಶ್ ಜಿ ಮೆಸ್ತಾ ವಂದಿಸಿದರು.