ಕಡಬ ತಾಲೂಕಿನ ಬಿಳಿನೆಲೆ ಗ್ರಾಮದಲ್ಲಿರುವ ಐಸಿಎಆರ್ – ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಸಿಪಿಸಿಆರ್ ಐ ಸಂಶೋಧನಾ ಕೇಂದ್ರ ಮತ್ತು ಅಂತಾರಾಷ್ಟ್ರೀಯ ತೆಂಗು ವಂಶಾಭಿವೃದ್ಧಿ ಬ್ಯಾಂಕ್ ಮುಚ್ಚಬಾರದು ಮತ್ತು ಸ್ಥಳಾಂತರಗೊಳ್ಳಬಾರದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಅವರಿಗೆ ಮನವಿ ಮಾಡಿದ್ದಾರೆ.
ಬುಧವಾರ ಸಚಿವರನ್ನು ನವದೆಹಲಿಯಲ್ಲಿರುವ ಕಚೇರಿಯಲ್ಲಿ ಭೇಟಿಯಾದ ಅವರು, ಸಿಪಿಸಿಆರ್ ಐನ ಈ ಕೇಂದ್ರ ಕೃಷಿಕರಿಗೆ ವರದಾನವಾಗಿದೆ. ಮುಂದಿನ ತಲೆಮಾರಿಗಾಗಿ ಬೇರೆ ಬೇರೆ ದೇಶದ ಸುಮಾರು 455 ತೆಂಗಿನ ತಳಿಗಳನ್ನು ಸಂರಕ್ಷಿಸಲಾಗಿದ್ದು, ಇಲ್ಲಿ ರತಾಜ್ಯ, ರಾಷ್ಟ್ರೀಯ ಸಂಶೋಧನೆಗೆ ವಿದ್ಯಾರ್ಥಿಗಳಿಗೆ ಮತ್ತು ಕೃಷಿಕರಿಗೆ ನೆರವಾಗುತ್ತಿದೆ. ಈ ಸಂಸ್ಥೆಯನ್ನು ನಂಬಿದ ಸಾವಿರಾರು ಕೃಷಿಕರು ಬಿಳಿನೆಲೆ ಗ್ರಾಮದಲ್ಲಿ ಬದುಕು ಕಟ್ಟಿಕೊಂಡಿದ್ದು, ಇದು ನೂರಾರು ಕುಟುಂಬದ ಜೀವನಾಡಿಯಾಗಿದೆ. ಹೀಗಿದ್ದ ಸಂದರ್ಭ ಸ್ಥಳಾಂತರಗೊಂಡರೆ ಎಲ್ಲರಿಗೂ ಸಮಸ್ಯೆಯಾಗಲಿದೆ ಎಂದು ವಿವರಿಸಿದರು. ಇದೇ ಸಂದರ್ಭ ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸಹಿತ ಪ್ರಮುಖರು ಪ್ರತ್ಯೇಕವಾಗಿ ಕೃಷಿ ಸಚಿವರಿಗೆ ಮನವಿ ಮೂಲಕ ಕೇಂದ್ರ ಸ್ಥಳಾಂತರಗೊಳ್ಳದಂತೆ ಒತ್ತಾಯಿಸಿದ್ದಾರೆ.