ಕರಾವಳಿಯ ಸಾಂಪ್ರದಾಯಿಕವಾದ ವಿಶಿಷ್ಟ ಕಲೆ ಯಕ್ಷಗಾನ ಉಳಿಯಬೇಕಾದರೆ ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಕಲೆಯ ಅಭಿರುಚಿಯನ್ನು ಬೆಳೆಸಬೇಕು. ಸಾರ್ವಜನಿಕರು ತನುಮನದಿಂದ ಪ್ರೋತ್ಸಾಹ ನೀಡುವ ಮೂಲಕ ಯಕ್ಷಗಾನ ಬಯಲಾಟ ವಿಜೃಂಭಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟರು.
ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಮಿತಿ ಬಿ.ಸಿ.ರೋಡು ಆಶ್ರಯದಲ್ಲಿ ಕಾಸರಗೋಡು ಶ್ರೀ ಗೋಪಾಲಕಷ್ಣ ಯಕ್ಷಗಾನ ಕಲಾಮಂಡಳಿ ಇವರಿಂದ ಏರ್ಪಡಿಸಲಾದ ಯಕ್ಷಗಾನ ಸಪ್ತಾಹ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಮ್.ಈಶ್ವರ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿ ಪೌರಾಣಿಕ ಕಥೆಗಳನ್ನು ಹಾಗೂ ಮೌಲ್ಯಗಳನ್ನು ತಿಳಿಯಲು ಯಕ್ಷಗಾನ ಕಲೆ ಸಹಕಾರಿಯಾಗಿದೆ. ಕಾಲಮಿತಿ ಯಕ್ಷಗಾನ ಬಂದಿರುವುದರಿಂದ ಪ್ರೇಕ್ಷಕರಿಗೆ ಅನುಕೂಲವಾಗಿದೆ ಎಂದರು.
ಬಂಟ್ವಾಳ ಪುರಸಭಯ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಮಾತನಾಡಿ ಕಲೆ ಮನರಂಜನೆಯೊಂದಿಗೆ ಸಾಮಾಜಿಕ ಮೌಲ್ಯಗಳನ್ನು ತಿಳಿಸುತ್ತದೆ ಎಂದು ನುಡಿದ ಅವರು ಕಳೆದು ಎಂಟು ವರ್ಷಗಳಿಂದ ಯಕ್ಷಗಾನ ಸಪ್ತಾಹವನ್ನು ಮೆಲ್ಕಾರ್‌ನಲ್ಲಿ ಮಾಡುತ್ತಿರುವ ಸಮಿತಿಯನ್ನು ಅಭಿನಂದಿಸಿದರು.
ಯಕ್ಷಗಾನ ಸಪ್ತಾಹ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಸ್ತಾವನೆಗೈದು ಸಹಕರಿಸಿದ ಸಂಘಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು. ಉಪಾಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣ ಶರ್ಮ ವಂದಿಸಿದರು . ಕಲಾವಿದ ಮಂಜು ವಿಟ್ಲ ನಿರೂಪಿಸಿದರು.