ಚೆನ್ನೈತ್ತೋಡಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ “ಶತಮಾನೋತ್ಸವದ ಸಂಭ್ರಮ”ವು ಡಿಸೆಂಬರ್ 22ರಂದು ನಡೆಯಲಿದೆ.
ಬೆಳಿಗ್ಗೆ 10.15 ಕ್ಕೆ ರಾಜ್ಯ ವಸತಿ, ನಗರಾಡಳಿತ ಸಚಿವ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಉದ್ಘಾಟಿಸುವರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸುವರು. ಶತಮಾನೋತ್ಸವದ ಸವಿನೆನಪಿಗಾಗಿ ನಿರ್ಮಿಸಲ್ಪಟ್ಟ ನೂತನ ಭೋಜನ ಶಾಲೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತು ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ತಾಲೂಕು ಪಂಚಾಯತು ಅಧ್ಯಕ್ಷ ಚಂದ್ರಹಾಸ ಕರ್ಕೆರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಸದಸ್ಯೆ ರತ್ನಾವತಿ ಜೆ.ಶೆಟ್ಟಿ, ಗ್ರಾಮ ಪಂಚಾಯತು ಅಧ್ಯಕ್ಷ ಯತೀಶ್ ಎಂ.ಶೆಟ್ಟಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಮತ್ತು ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಗುರುಗಳಿಗೆ ಗುರುವಂದನೆ, ಶತಮಾನೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಹಂಝ ಎ. ಬಸ್ತಿಕೋಡಿ ತಿಳಿಸಿದ್ದಾರೆ.
ಅವರು ಸೋಮವಾರ ಚೆನ್ನೈತ್ತೋಡಿ ಶಾಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಧ್ಯಾಹ್ನ 1ರಿಂದ ಹಳೇ ವಿದ್ಯಾರ್ಥಿಗಳಿಂದ “ಮನೋರಂಜನಾ ಕಾರ್‍ಯಕ್ರಮ”, 2 ಗಂಟೆಯಿಂದ ತೆಲಿಕೆದ ತೆನಾಲಿ ಕಾರ್ಕಳ ತಂಡದವರಿಂದ “ತೆಲಿಕೆದ ಬರ್‍ಸ” ಹಾಸ್ಯ ಕಾರ್‍ಯಕ್ರಮ, ೩ಗಂಟೆಯಿಂದ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈಭವ, ೪ಗಂಟೆಗೆ ಮಕ್ಕಳಿಂದ ಯಕ್ಷಗಾನ, ಸಂಜೆ ೬ಗಂಟೆಗೆ ಸಮಾರೋಪ ಸಮಾರಂಭ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ, ರಾತ್ರಿ ೮ರಿಂದ ವಿದಾತ್ರಿ ಕಲಾವಿದರಿಂದ ತುಳು ನಾಟಕ ನಡೆಯಲಿದೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಪುಸ್ತಕಗಳು ಹಾಗೂ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಡಿಸೆಂಬರ್ 20ರಂದು ಅಪರಾಹ್ನ ೩.೩೦ರಿಂದ ಬಸ್ತಿಕೋಡಿಯಿಂದ ಶಾಲೆಯವರೆಗೆ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು
ಶಾಲಾ ಇತಿಹಾಸ:
ಬಂಟ್ವಾಳ ತಾಲೂಕಿನ ವಾಮದಪದವು ಪೇಟೆಯ ಹೃದಯಭಾಗದಲ್ಲಿ ೧೯೧೮ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡ ಈ ವಿದ್ಯಾದೇಗುಲ ನಂತರ ದಾನಿಗಳು, ಶಿಕ್ಷಕರು, ವಿದ್ಯಾಭಿಮಾನಿಗಳ ಸಹಕಾರದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಗೊಂಡಿತು. ನಂತರ ಹಂತಹಂತವಾಗಿ ಬೆಳೆಯುತ್ತಾ ಬಂದ ಈ ಶಾಲೆಯು ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳ ವ್ಯಕ್ತಿತ್ವದ ಸಮಗ್ರ ವಿಕಸನಕ್ಕೆ ಪೂರಕವಾದ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಅತ್ಯುತ್ತಮ ಶಾಲೆಯಾಗಿ ಶೈಕ್ಷಣಿಕ ವಲಯದಲ್ಲಿ ಗುರುತಿಸಲ್ಪಟ್ಟಿತು. ಪರಿಸರದ ಹಲವು ಗ್ರಾಮಗಳ ಮಕ್ಕಳ ಪಾಲಿಗೆ ಈ ಶಾಲೆಯು ಆಶಾಕಿರಣವಾಗಿದ್ದು ಇಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಅದೆಷ್ಟೋ ಮಂದಿ ಇಂದು ರಾಜ್ಯ, ದೇಶ ವಿದೇಶಗಳಲ್ಲಿ ಉನ್ನತ ಸಾಧನೆಗೈಯುತ್ತಿದ್ದಾರೆ. ಪ್ರಸ್ತುತ ಉನ್ನತೀಕರಿಸಿದ ಮಾದರಿ ಶಾಲೆಯಾಗಿರುವ ಈ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಒಂದರಿಂದ ೮ನೇ ತರಗತಿವರೆಗೆ ೨೯೪ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. 12 ಮಂದಿ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ.
ಶತಮಾನ ಯೋಜನೆಗಳು:
ರೂ.25 ಲಕ್ಷ ವೆಚ್ಚದಲ್ಲಿ ಮಕ್ಕಳ ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವ ರಂಗಮಂದಿರ ನಿರ್ಮಾಣ, 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅನ್ನದಾಸೋಹ ಭೋಜನ ಶಾಲೆ ನಿರ್ಮಾಣ, ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿ ಸುಸಜ್ಜಿತ ಆಟದ ಮೈದಾನ, ಶಾಲಾ ಆವರಣ ಗೋಡೆ ನಿರ್ಮಾಣ, ಶೌಚಾಲಯ, ವಾಚನಾಲಯ, ಕ್ರೀಡಾ ಸಾಮಾಗ್ರಿಗಳ ದಾಸ್ತಾನು ಕೊಠಡಿ ನಿರ್ಮಾಣ ಸಹಿತ ಗುಣಮಟ್ಟದ ಕಲಿಕೆಗೆ ಪೂರಕವಾದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಶತಮಾನೋತ್ಸವದ ಕೊಡುಗೆಯಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಈ ಪೈಕಿ 10ಲಕ್ಷ ರೂಪಾಯಿ ವೆಚ್ಚದ ಅನ್ನದಾಸೋಹ ಭೋಜನ ಶಾಲೆ ನಿರ್ಮಾಣಗೊಂಡು ಶತಮಾನೋತ್ಸವ ಸಂದರ್ಭದಲ್ಲಿ ಸಮರ್ಪಣೆಯಾಗಲಿದ್ದು ಉಳಿದ ಅಭಿವೃದ್ಧಿ ಯೋಜನೆಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಈ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ನೆರವೇರುವರೇ ಸರಕಾರ, ಸ್ಥಳೀಯಾಡಳಿತಗಳು, ಜನಪ್ರತಿನಿಧಿಗಳು, ದಾನಿಗಳು, ಶಾಲಾ ಹಳೇ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳ ಆರ್ಥಿಕ ನೆರವಿನ ಅಗತ್ಯವಿದೆ. ಶತಮಾನೋತ್ಸವ ಸಮಿತಿ, ಶಾಲಾಭಿವೃದ್ಧಿ ಸಮಿತಿ, ಹಳೇ ವಿದ್ಯಾರ್ಥಿ ಸಂಘ, ಶಿಕ್ಷಕವೃಂದ, ವಿದ್ಯಾರ್ಥಿ ವೃಂದ ಹಾಗೂ ಪೋಷಕ ವೃಂದ ಶತಮಾನೋತ್ಸವದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ.