ಕೆಳಗಿನಪೇಟೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು. ಪುರಸಭೆಯ ಪ್ರತಿಯೊಂದು ಮೀಟಿಂಗ್ ಗಳಲ್ಲಿ ವಿಷಯ ಪ್ರಸ್ತಾಪಿಸಿದರೂ ಪರಿಹಾರ ದೊರಕಿಲ್ಲ, ಹಲವು ಮನವಿಗಳನ್ನು ನೀಡಿದರೂ ಸ್ಪಂದನೆ ಇಲ್ಲ. ಹೀಗಾಗಿ ಧರಣಿ ಕುಳಿತುಕೊಳ್ಳದೆ ಬೇರೆ ವಿಧಿಯೇ ಇಲ್ಲ ಎಂದು ಆರೋಪಿಸಿ ಬಂಟ್ವಾಳದ ಎಸ್.ಡಿ.ಪಿ.ಐ. ನೇತೃತ್ವದಲ್ಲಿ ಶನಿವಾರ ಬಂಟ್ವಾಳ ಪುರಸಭೆ ಕಚೇರಿಯ ಬಾಗಿಲಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ಬಂಟ್ವಾಳ ಪುರಸಭಾ 8ನೇ ವಾರ್ಡಿನ ಸುಮಾರು 170ಕ್ಕೂ ಅಧಿಕ ಮನೆಗಳ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಇದರಿಂದ ತೊಂದರೆಯಾಗುತ್ತಿದೆ. ಹೊಸ ಪೈಪ್‌ಲೈನ್ ಅಳವಡಿಸಬೇಕು. ಈ ಸಂದರ್ಭ ನೀರು ಸರಾಗವಾಗಿ ಬರುವಂತೆ ಮಾಡಬೇಕು ಎಂದು ಒತ್ತಾಯಿಸಿ ಧರಣಿ ಕೂರಲಾಯಿತು. ಪುರಸಭಾ ಸದಸ್ಯ ಮುನೀಶ್ ಅಲಿ ಧರಣಿಯ ನೇತೃತ್ವ ವಹಿಸಿ ಮಾತನಾಡಿ, ಬಂಟ್ವಾಳ ಪುರಸಭೆಗೆ ಒಳಪಟ್ಟ ವಾರ್ಡ್ ನಂ-೮ ಕೆಳಗಿನಪೇಟೆ ವ್ಯಾಪ್ತಿಯಲ್ಲಿ ಪ್ರತಿ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆಯ ಉದ್ಘವಾಗುತ್ತಿದ್ದು, ಇದರಿಂದ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಇಲ್ಲಿನ ಹಳೆ ಪೈಪ್‌ಲೈನ್‌ನಿಂದಾಗಿ ಬೇಸಿಗೆ ಸಂದರ್ಭದಲ್ಲಿ ನೀರಿನ ವೇಗ ಕಡಿಮೆಯಾಗಲು ಕಾರಣವಾಗಿದ್ದು, ಇದನ್ನು ಸರಿಪಡಿಸಬೇಕು. ಅದಲ್ಲದೆ, ಬಹುಗ್ರಾಮ ಕುಡಿಯುವ ನೀರು ಯೋಜನೆಯ ಹೊಸ ಪೈಪ್‌ಲೈನ್ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕವಾಗಿ ನಡೆದಿದೆ. ಹಲವು ಕಡೆಗಳಲ್ಲಿ ಈ ಹೊಸ ಪೈಪ್‌ಲೈನ್ ಒಡೆದು ಹಾನಿಯಾಗಿದ್ದು ನೀರು ಪೋಲಾಗುತ್ತಿದೆ. ಇದರಿಂದ ತಗ್ಗು ಪ್ರದೇಶವಾದ ಕೆಳಗಿನಪೇಟೆಯ ವ್ಯಾಪ್ತಿಯ ಸುಮಾರು ೧೮೦ಕ್ಕೂ ಹೆಚ್ಚಿನ ಮನೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಸಮಸ್ಯೆಯ ಬಗ್ಗೆ ಈ ಮೊದಲಿನ ಪುರಸಭಾ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸಹಿತ ಇತರ ಅಧಿಕಾರಿಗಳ ಗಮನಕ್ಕೆ ತಂದರೂ, ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ನೀಡಿಲ್ಲ. ಸ್ಥಳಕ್ಕೆ ತೆರಳಿ ನೀರಿನ ಸಮಸ್ಯೆಯನ್ನು ಪತ್ತೆಹಚ್ಚುವ ಕಾರ್ಯವನ್ನು ಮಾಡಿಲ್ಲ ಎಂದು ಆರೋಪಿಸಿದರು.
ಹೊಸ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಈಗಾಗಲೇ ಅಳಡಿಕೆಯಾಗಿರುವ ಪೈಪ್ ಲೈನ್‌ಗಳ ಗುಣಮಟ್ಟಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಒಡೆದಿರುವ ಪೈಪ್‌ಗಳನ್ನು ದುರಸ್ಥಿ ಕಾರ್ಯವನ್ನು ತಕ್ಷಣವೇ ಆರಂಭಿಸಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ವಾರ್ಡ್ ನಾಗರಿಕರೊಂದಿಗೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಶಾಹುಲ್ ಎಸ್.ಎಚ್., ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಎಸ್ಡಿಪಿಐ ಶಾಖಾ ಅಧ್ಯಕ್ಷ ಅಬ್ದುಲ್ ಲತೀಫ್, ಕಾರ್ಯದರ್ಶಿ ಯಾಸಿರ್ ಅರಾಫತ್, ಮುಖಂಡರಾದ ಇಕ್ಬಾಲ್ ಐಎಂಆರ್, ಉಬೈದುಲ್ಲಾ, ಬಶೀರ್, ಇಸ್ಮಾಯಿಲ್, ಶಬೀರ್, ಆಮ್ ಆದ್ಮಿ ಪಕ್ಷದ ಹಮೀದ್, ಇಸ್ಮಾಯಲ್ ಅರಬಿ, ಸಿಪಿಎಂನ ಪ್ರಭಾಕರ್, ಜೆಡಿಎಸ್‌ನ ಸವಾಝ್, ಕೆ.ಎಚ್. ಅಬೂಬಕರ್, ಸವಾಝ್ ಹಾಜರಿದ್ದರು.