ರಾಜ್ಯದಲ್ಲಿ ಅತಿವೃಷ್ಠಿಯಿಂದ ಹಾನಿಯಾದ ಅಡಕೆಬೆಳೆ ಸಹಿತ ಇತರ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ಒದಗಿಸಲು17,527 ಲಕ್ಷ ರೂ. ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ತೋಟಗಾರಕಾ ಸಚಿವ ಎಂ.ಸಿ.ಮನಗೂಳಿ ತಿಳಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ದ.ಕ.ಜಿಲ್ಲೆಯಲ್ಲಿ ಅಡಕೆ ಕೊಳೆರೋಗದ ಬಗ್ಗೆ ಸರಕಾರದ ಗಮನಕ್ಕೂ ಬಂದಿದ್ದು, ಇದನ್ನು ತಡೆಗಟ್ಟಲು ಇಲಾಖೆ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಅಡಕೆಬೆಳೆ ಸಹಿತ ಇತರ ತೋಟಗಾರಿಕಾ ಬೆಳೆಗಳ ರೋಗಕ್ಕೆ ಸಸ್ಯ ಸಂರಕ್ಷಣೆ ಔಷಧಿ ಖರೀದಿಸಿದ ರೈತರಿಗೆ ವಿವಿಧ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ ಎಂದು ಸಚಿವರು ಶಾಸಕ ರಾಜೇಶ್ ನಾಯ್ಕ್ ಅವರ ಉಪ ಪ್ರಶ್ನೆಗೆ ಉತ್ತರಿಸಿದ್ದಾರೆ. ಜಿಲ್ಲೆಯಲ್ಲಿ ಸರ್ವೇ ಕಾರ್ಯ ನಡೆದಿದ್ದು,56474 ಅಡಕೆ ಬೆಳೆಗಾರರ ಶೇ.33 ಕ್ಕಿಂತಲೂ ಹೆಚ್ಚು ಹಾನಿಯಾಗಿದ್ದು,ಕೃಷಿಕರ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸುವ ಕಾರ್ಯ ನಡೆಯತ್ತಿದೆ ಎಂದು ಸಚಿವ ಎಂ.ಸಿ.ಮನಗೂಳಿ ಅವರು ಶಾಸಕರಿಗೆ ಮಾಹಿತಿ ನೀಡಿದ್ದಾರೆ.