ಮಂಗಳೂರು- ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಮೂಲರಪಟ್ನ ಸೇತುವೆಯನ್ನು ಪುನರ್ ನಿರ್ಮಾಣದ ಕಾಮಗಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದ ವತಿಯಿಂದ ಕೈಗೆತ್ತಿ ಕೊಳ್ಳಲು ಪರಿಶೀಲಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ತಿಳಿಸಿದ್ದಾರೆ.
ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಈ ಲಿಖಿತ ಉತ್ತರ ನೀಡಿದ್ದಾರೆ.ಕುಸಿದಿರುವ ಸೇತುವೆಯ ಪಕ್ಕದಲ್ಲಿ ತೂಗು ಸೇತುವೆಯಿದ್ದು,ಪಾದಚಾರಿಗಳು ಮಾತ್ರ ಇದನ್ನು ಉಪಯೋಗಿಸುತ್ತಾರೆ. ಈ ತೂಗು ಸೇತುವೆ ವರೆಗಿನ ಇಕ್ಕೆಲಗಳ ಕೂಡು ರಸ್ತೆಯನ್ನು ವಾಹನ ಸಂಚಾರಕ್ಕಾಗಿ ಬದಲಿಯಾಗಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಅನುದಾನ ಬಿಡುಗಡೆಗೆ ಶಾಸಕದ್ವಯರ ಮನವಿ: ಕಳೆದ ಜೂನ್ ನಲ್ಲಿ ಮಂಗಳೂರು-ಬಂಟ್ವಾಳ ತಾಲೂಕನ್ನು ಸಂಧಿಸುವ ಪಲ್ಗುಣಿ ನದಿಗೆ ನಿರ್ಮಿ ಸಲಾದ ಸೇತುವೆ ಕುಸಿದಿದ್ದು,ಎರಡು ತಾಲೂಕಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ.ಈ ಸೇತುವೆ ಶೀಘ್ರವಾಗಿ ನಿರ್ಮಾಣವಾಗಬೇಕಾಗಿರುವ ಹಿನ್ನಲೆಯಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕರಾದ ಯು.ರಾಜೇಶ್ ನಾಯ್ಕ್ ಹಾಗೂ ಡಾ.ಭರತ್ ಶೆಟ್ಟಿ ಅವರು ಲೋಕೋಪಯೋಗಿ ಸಚಿವ ರೇವಣ್ಣ ಅವರಿಗೆ ಗುರುವಾರ ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ. ಹಾಗೆಯೇ ಸೇತುವೆ ನಿರ್ಮಾಣವಾಗುವ ತನಕ ತಾತ್ಕಲಿಕ ರಸ್ತೆ ನಿರ್ಮಾಣಕ್ಕೂ ಅನುದಾನ ಬಿಡುಗಡೆಗೊಳಿಸುವಂತೆ ಮನವಿಯಲ್ಲಿ ಶಾಸಕರು ಆಗ್ರಹಿಸಿದ್ದಾರೆ.
ಎಲೆಕ್ಟ್ರಿಕಲ್ ಇಂಜಿನಿಯರ್ ನೇಮಿಸಿ :
ಆರ್.ಡಿ.ಪಿ.ಆರ್ ಇಲಾಖೆಯ ಪಂಚಾಯತ್ ರಾಜ್ಇಂಜಿನಿಯರಿಂಗ್ ವಿಭಾಗದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹುದ್ದೆಯನ್ನು ಸೃಷ್ಠಿಸುವಂತೆ ಗುರುವಾರ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕಟ್ಟಡದ ಕಾಮಗಾರಿಯ ಸುಪರ್ ವೈಸ್ ಮಾಡಲು ಸಿವಿಲ್ ಇಂಜಿನಿಯರ್ ಗಳು ಜವಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ದರಿಲ್ಲ ಹಾಗಾಗಿ ಸಾವಿರಕ್ಕು ಮಿಕ್ಕಿದ ಕಾಮಗಾರಿಗಳು ಸ್ಥಗಿತಗೊಂಡಿದೆ.ಹಾಗಾಗಿ ಎಲೆಕ್ಟ್ರಕ್ ಇಂಜಿನಿಯರ್ ಹುದ್ದೆ ಸೃಷ್ಟಿಸುವ ಅವಶ್ಯವಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಈ ಕುರಿತು ಪರಿಶೀಲಿಸುವಂತೆ ಸೂಚನೆ ನೀಡಿದರು
.ಈ ಹಂತದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಅವರು,ಕಾಮಗಾರಿಯ ಸಿವಿಲ್ ಟೆಂಡರ್ ನಲ್ಲಿಯೇ ಇದನ್ನು ಸೇರಿಸಲಾಗಿದ್ದರಿಂದ ಪ್ರತ್ಯೇಕವಾಗಿ ಈ ಹುದ್ದೆ ಸೃಷ್ಟಿಸುವ ಪ್ರಮೇಯ ಬರುವುದಿಲ್ಲ,ಕುಡಿಯುವ ನೀರಿನ ವಿದ್ಯುದ್ದೀಕರಣ ಮೆಸ್ಕಾಂ ಸಂಪರ್ಕ ಕಲ್ಪಿಸುವಲ್ಲಿ ವಿಳಂಬವಾದರೆ ಅದನ್ನು ನಾವೇ ಜವಬ್ದಾರಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು,ಇದರಿಂದ ದೊಡ್ಡ ಮಟ್ಟದ ಸಮಸ್ಯೆ ಇಲ್ಲ,ದ.ಕ.ಜಿಲ್ಲೆಯಲ್ಲಿ ಇಂತಹ ಸಮಸ್ಯೆ ಕಂಡುಬಂದರೆ ಪರಿಹರಿಸಲು ಜಿಪಂ ಸಿಇಒ ಅವರಿಗೆ ತಕ್ಷಣವೇ ನಿರ್ದೇಶನ ನೀಡಲಾಗುವುದು ಎಂದರು.
ಸೇತುವೆ ಕುರಿತು ಹಿಂದೆ ಬಂಟ್ವಾಳನ್ಯೂಸ್ ನಲ್ಲಿ ವರದಿ.