ಅರ್ಶದೀಸ್ ಅಸೋಸಿಯೇಷನ್ ವತಿಯಿಂದ ಶೈಖುನಾ ಕೋಟ ಉಸ್ತಾದ್, ಶಹೀದೇ ಮಿಲ್ಲತ್ ಸಿಎಂ ಉಸ್ತಾದ್ ಅವರ ಅನುಸ್ಮರಣಾ ಮಹಾ ಸಮ್ಮೇಳನ ಹಾಗೂ ಕೇಸ್ ಡೈರಿ ಐತಿಹಾಸಿಕ ಕಾರ್ಯಕ್ರಮ ಡಿ. 18ರಂದು ಬೆಳಿಗ್ಗೆ 10.30 ರಿಂದ ಸಂಜೆ 4 ರವರೆಗೆ ಮಾಣಿ ಸಮೀಪದ ನೇರಳಕಟ್ಟೆ ಶಂಸುಲ್ ಉಲಮಾ ನಗರದ ಇಂಡಿಯನ್ ಆಡಿಟೋರಿಯಂ ನಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಕೆ.ಯು. ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ತಿಳಿಸಿದ್ದಾರೆ.
ಬಿ.ಸಿ.ರೋಡ್ ನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಿಗ್ಗೆ ೯:೩೦ಕ್ಕೆ ಅರ್ಶದೀಸ್ ಸಂಗಮ ಜರಗಲಿದ್ದು, ಶೈಖುನಾ ಕೊಡುವಳ್ಳಿ ಉಸ್ತಾದ್ ದುಆಃ ನೆರವೇರಿಸುವರು. ಅರ್ಶದೀಸ್ ಅಧ್ಯಕ್ಷ ಮುಹಮ್ಮದ್ ಶರೀಫ್ ಅರ್ಶದಿ ಅಡ್ಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಶೈಖುನಾ ಇಬ್ರಾಹಿಂ ಕುಟ್ಟಿ ದಾರಿಮಿ ಉದ್ಘಾಟಿಸುವರು. ಉಸ್ತಾದ್ ರಹ್ಮತ್ತುಲ್ಲಾ ಖಾಸಿಮಿ ಮುತ್ತೇಡಂ ಅವರು ಅನುಸ್ಮರಣಾ ಪ್ರಭಾಷಣ ಮಾಡುವರು ಎಂದು ಮಾಹಿತಿ ನೀಡಿದರು.
ಕಳೆದ ೯ ವರ್ಷಗಳ ಹಿಂದೆ ನಿಗೂಢವಾಗಿ ಮೃತಪಟ್ಟಿರುವ ಶಹೀದೇ ಮಿಲ್ಲತ್ ಸಿಎಂ ಉಸ್ತಾದ್ ಅವರ ಅಸಹಜ ಸಾವು ಪ್ರಕರಣವನ್ನು ಕೇರಳ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಸಿಬಿಐ ವರದಿಯನ್ನು ತಳ್ಳಿ ಹಾಕಿರುವ ಕೇರಳ ಹೈಕೋರ್ಟ್ ಜನಾಭಿಪ್ರಾಯಕ್ಕೆ ವಿಶೇಷ ಮನ್ನಣೆ ಕೊಡಬೇಕೆಂಬುವುದೇ ಈ ಸಮ್ಮೇಳದ ಮುಖ್ಯ ಉದ್ದೇಶ ಎಂದು ಹೇಳಿದರು.
ಉಸ್ತಾದ್ ಅವರ ಅಸಹಜ ಸಾವು ಪ್ರಕರಣವನ್ನು ಸರಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಕಾಸರಗೋಡುವಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಯುತ್ತಿದ್ದು, ಸಹಿ ಅಭಿಯಾನ ಮೂಲಕ ಆಂದೋಲನವಾಗಿ ರೂಪುಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅರ್ಶದಿ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಅಮೀರ್ ಅರ್ಶದಿ, ನಝೀರ್ ಅರ್ಶದಿ, ಇಸ್ಮಾಯಿಲ್ ಅರ್ಶದಿ, ಶರೀಫ್ ಅರ್ಶದಿ ಉಪಸ್ಥಿತರಿದ್ದರು.