ಫರಂಗಿಪೇಟೆ

ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ: ಕನ್ನಡ ಅಸ್ತಿತ್ವ ಉಳಿಸಲು ಎ.ಎಸ್.ಎನ್.ಹೆಬ್ಬಾರ್ ಕರೆ

ಕನ್ನಡದಲ್ಲಿ ವಿಪುಲವಾದ ಪದಪುಂಜಗಳಿವೆ, ಆದರೆ ಕನ್ನಡಕ್ಕೆ ಸಂಸ್ಕೃತ ತುರುಕಿಸುವ ಮೂಲಕ ಅಪಭ್ರಂಶ ಮಾಡಲಾಗುತ್ತಿದೆ ಎಂದು ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಹೇಳಿದರು.

ಫರಂಗಿಪೇಟೆಯಲ್ಲಿ ನಡೆದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು ಸರಕಾರವು ತನ್ನ ಆಡಳಿತ ಯಂತ್ರವಾಗಿ ಕನ್ನಡಕ್ಕೆ ಸಂಸ್ಕೃತವನ್ನು ತುರುಕಿಸುತ್ತಿದೆ. ಕನ್ನಡ ಪ್ರಾಚೀನ ಭಾಷೆಯಾಗಿದ್ದು,ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಿಂತ ಮೊದಲೇ ಹುಟ್ಟಿಕೊಂಡಿದೆ.ಕನ್ನಡದಲ್ಲಿ ವಿಪುಲವಾದ ಪದಪುಂಜಗಳಿವೆ. ಇದರ ಕ್ಷೇತ್ರ ಕಾರ್ಯಮಾಡುವುದರೊಂದಿಗೆ ಕನ್ನಡದ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಕನ್ನಡ ಧ್ವನಿಪೂರ್ಣವಾದ ಭಾಷೆಯಾಗಿದ್ದು, ಬದುಕಿನ ಅಂಗವಾಗಿದೆ. ಕನ್ನಡವು ಕೇವಲ ಕಪ್ಪು , ಬಿಳುಪು ಅಕ್ಷರದ ಬರವಣಿಗೆಯಾಗದೆ, ನಿರಂತರ ಸಾಹಿತ್ಯವಾಗಲಿ ಎಂದು ಹೇಳಿದರು.

ಅಮ್ಮವೇ ಮೊದಲ ಕವಯತ್ರಿ, ಜೋಗುಳವೇ ನಮ್ಮ ಮೊದಲಕಾವ್ಯ, ಆದರೆ ಇತ್ತೀಚಿನ ದಿನಗಳಲ್ಲಿ ಯಾವ ತಾಯಂದಿರಲ್ಲೂ ಜೋಗುಳದ ಹಾಡು ಕೇಳಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಸಮ್ಮೇಳನಾಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ ಮಾತನಾಡಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಗೊಳಿಸಿದ ಕಸಾಪ, ಸಮ್ಮೇಳನ ಸಂಘಟಕರು, ಹಾಗೂ ಸಮ್ಮೇಳನಾಧ್ಯಕ್ಷರ ಭಾಷಣ ಅಲಿಸಿದ ಸಾಹಿತ್ಯಾಭಿಮಾನಿಗಳಿಗೆ ಕೃತಜ್ಙತೆ ಸಲ್ಲಿಸಿದರು.

ಮಂಗಳೂರಲ್ಲಿ ರಾಜ್ಯ ಸಮ್ಮೇಳನ:

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಗಳೂರಿನಲ್ಲಿ ಆಯೋಜಿಸಲು ಯೋಚಿಸಲಾಗಿದೆ ಎಂದು ದ .ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಸಾಹಿತ್ಯವು ಸಮಾಜದ ಆಗು,ಹೋಗುಗಳಿಗೆ ಕಿಟಕಿಯಾಗಿದೆ, ಸಾಹಿತ್ಯಕ್ಕೆ ವಿಶೇಷವಾದ ಶಕ್ತಿಯಿದ್ದು, ಸಾಹಿತ್ಯ ಸಮಾಜದ ಒಳಿತಿಗಾಗಿ ಕೆಲಸಮಾಡಬೇಕಾಗಿದೆ ಎಂದು ಅವರು ಹೇಳಿದರು. ಪೋಷಕರು ತಮ್ಮ ಮಕ್ಕಳನ್ನು ಸಾಹಿತ್ಯ ಸಮ್ಮೇಳನ,ಪುಸ್ತಕ ಮೇಳದಂತ ಕಾರ್ಯಕ್ರಮಗಳಿಗೆ ಕರೆ ತಂದು ಸಾಹಿತ್ಯದ ಅಭಿರುಚಿ ಮೂಡಿಸಬೇಕು ಎಂದು ಅವರು ಹೇಳಿದರು.

ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬಂಟ್ವಾಳ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಆಚಾರ್ಯ, ಜೋರ್ಡುಮಾರ್ಗ ನೇತ್ರಾವತಿ ಜೇಸಿ ಅಧ್ಯಕ್ಷೆ ಸವಿತಾ ನಿರ್ಮಲ್ ಕತಾರ್ ಕರ್ನಾಟಕ ಸಂಘದ ಉಪಾಧ್ಯಕ್ಷ ರವಿ ಶೆಟ್ಟಿ ಮೂಡಂಬೈಲು , ಸದಾಶಿವ ಡಿ.ತುಂಬೆ, ಪ್ರಕಾಶ ಕಾರಂತ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣಕುಮಾರ್ ಪೂಂಜ, ಬಂಟ್ವಾಳ ತಾ.ಕಸಾಪ ಅಧ್ಯಕ್ಷ ಮೋಹನ್ ರಾವ್ ಮೊದಲಾದವರು ವೇದಿಕೆಯಲ್ಲಿದ್ದರು‌. ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎನ್‌ ಗಂಗಾಧರ ಆಳ್ವ ಸ್ವಾಗತಿಸಿದರು‌. ಸದಾನಂದ ಆಳ್ವ ಕಂಪ ವಂದಿಸಿದರು. ಕೆ.ಸುಜಾತ,ಶ್ರಿನಿವಾಸ ಕೆದಿಲ ನಿರೂಪಿಸಿದರು. ಟಿ.ಸುಖೇಶ್ ಶೆಟ್ಟಿ ಫರಂಗೀಪೇಟೆ ನಿರ್ವಹಿಸಿದರು.

20ನೇ ಸಮ್ಮೇಳನ ಮಾಣಿಯಲ್ಲಿ : ಸಚಿವ ಯು.ಟಿ.ಖಾದರ್ ಮುಂದಿನ 20 ನೇ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ ಆಚರಿಸಲು ಮಾಣಿಯ ಸಾಹಿತ್ಯಾಭಿಮಾನಿಗಳಿಗೆ ವೀಳ್ಯ ಪ್ರದಾನ ಮಾಡಿದರು.

ಸನ್ಮಾನ:

ಫರಂಗಿಪೇಟೆ ಸೇವಾಂಜಲಿ  ಸಭಾಂಗಣದ ಡಾ.ಎಫ್.ಎಚ್.ಒಡೆಯರ್ ವೇದಿಕೆಯಲ್ಲಿ ನಡೆದ 19 ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 14 ಮಂದಿ ಸಾಧಕರನ್ನು ಸನ್ನಾನಿಸಲಾಯಿತು.

ಶನಿವಾರ ಸಂಜೆ ಸಮ್ಮೇಳನದ ಸಮಾರೋಪಕ್ಕೆ ಮುನ್ನ ನಡೆದ ಸನ್ಮಾನ ಸಮಾರಂಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ  ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಬಂಟ್ವಾಳದಲ್ಲಿ ತನ್ನ ಕನಸಿನ ಕೂಸಾದ  ಕವಿ ಪಂಜೆ ಮಂಗೇಶ್ ರಾಯರ ಸಭಾಭವನ‌ 5  ಕೋ.ರೂ.ವೆಚ್ಚದಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಇದಕ್ಕೆ ಹೆಚ್ಚುವರಿ 3 ಕೋಟಿ.ರೂ.ವಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಮ್ಮೇಳನಾಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ, ಮಂಚಿ ವ್ಯ.ಸೇ.ಸ.ಸಂಘದ ಅಧ್ಯಕ್ಷ ಉಮ್ಮರ್ ಮಂಚಿ, ಸಾಧನಾ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ, ಬಂಟ್ವಾಳ ತಾ.ಕಸಾಪ ಅಧ್ಯಕ್ಷ ಮೋಹನ್ ರಾವ್, ಸ್ವಾಗತ ಸಮಿತಿ ಅಧ್ಯಕ್ಷ ಗಂಗಾಧರ ಆಳ್ವ, ಕಾರ್ಯಾಧ್ಯಕ್ಷ ಕೃಷ್ಣಕುಮಾರ್ ಪೂಂಜ ಮತ್ತಿತರರಿದ್ದರು.

ವೇ.ಮೂ.ಪೊಳಲಿ ಸುಬ್ರಹ್ಮಣ್ಯ ತಂತ್ರಿ(ಧಾರ್ಮಿಕ),ಎಂ.ಕೆ.ಗುರುವಪ್ಪ ಮೇರಮಜಲು(ಜಾನಪದ ಕಲೆ),ವಕೀಲ ಅಜಿತ್ ಕುಮಾರ್ ಅಡ್ಡೂರು(ಸಾಹಿತ್ಯ ಪರಿಚಾರಕ),ವಿಶ್ವನಾಥ ಶೆಟ್ಟಿ ಸುವರ್ಣನಾಡು( ಯಕ್ಷಗಾನ),ಪ್ರಕಾಶ್ ಕಾರಂತ್ ನರಿಕೊಂಬು(ಸಮಾಜಸೇವೆ) ,ಭಾಸ್ಕರ ಚೌಟ ಕುಮ್ಡೆರಲು( ಸಂಘಟನೆ),ಮೀನಾಕ್ಷಿ ನಾರಾಯಣ ಆಚಾರ್ಯ ( ನಾಟಿವೈದ್ಯೆ),ವಿ.ಶಂಕರ ಕಲ್ಲಡ್ಕ(ಕ್ರೀಡೆ) ಹರೀಶ್ ಪೆರ್ಗಡೆ ಕಾಂತಾಡಿಗುತ್ತು( ಸಮಾಜ ಸೇವೆ), ಎಸ್.ಎಂ.ಅಬುಬಕ್ಕರ್ ಸುರಿಬೈಲ್ ( ಶಿಕ್ಷಣ),ಕರ್ಗಲ್ಲು ವಿಶ್ವೇಶ್ವರ ಭಟ್(ಯಕ್ಷ ಶಿಕ್ಷಕರು),ಸದಾನಂದ ಆಳ್ವ ತೇವು( ಕ್ರೀಡೆ) ,ಬೊಂಡಾಲ ಸಚ್ಚಿದಾನಂದ ಶೆಟ್ಟಿ( ಶಿಕ್ಷಣ),ಜಯಂತ ನಾಯಕ್ ಪಾಣೆಮಂಗಳೂರು(ಸ್ಕೌಟ್ಸ್) ಅವರ ಸಾಧನೆಗಾಗಿ ಸನ್ಮಾನಿಸಲಾಯಿತು. ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತಾಲೂಕಿನ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರತೀಕ್ಷಾ,ಅನುಶ್ರೀ,ಮಿತೇಶ್,ಫಾತಿಮಾ ಮುನೀಸಾ,ಪ್ರತೀಜ್ಷಾ,ಕಾರ್ತಿಕ್ ಅವರನ್ನು ಅಳಿಕೆ ಸತ್ಯ ಸಾಯಿ ಲೋಕಸೇವಾ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ರಘು ಟಿ.ವಿ.ಅವರು ಅಭಿನಂದಿಸಿದರು. ಗಮಕಿ ಗಣಪತಿ ಪದ್ಯಾಣ, ನಿವೃತ್ತ ಶಿಕ್ಷಕ ರಮೇಶ್ ಎಂ.ಬಾಯಾರು ಉಪಸ್ಥಿತರಿದ್ದರು.

ಗೋಷ್ಠಿಗಳು: ಇದಕ್ಕು ಮೊದಲು ಉಪನ್ಯಾಸಕ ಕೆ.ಶ್ರೀಧರ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ- ಯುವಸ್ಪಂದನೆ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳದ ಇತಿಹಾಸ,ವಿಶ್ರಾಂತ ಶಿಕ್ಷಕ ಸೇರಾಜೆ ಶ್ರೀನಿವಾಸ ಭಟ್ ಅಧ್ಯಕ್ಷತೆಯಲ್ಲಿ ಸಾಹಿತ್ಯ ಪ್ರಸ್ತುತಿ,ವಿಟ್ಲ ವಿಠಲ. ಪ.ಪೂ.ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಅವರ ಅಧ್ಯಕ್ಷತೆಯಲ್ಲಿ ಮರೆಯಲಾಗದ ಮಹಾನುಭಾವರಿಗೆ ನುಡಿನಮನ,ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಹಾಗೂ ಮಾದಕವಸ್ತುಗಳು ಮತ್ತು ಸೈಬರ್ ಕ್ರೈಂ ಜಾಗೃತಿ ಕುರಿತು ಬಂಟ್ವಾಳ ಉಪವಿಭಾಗದ ಪೊಲೀಸ್ ಮಾಹಿತಿ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ