ಫರಂಗಿಪೇಟೆ

ಫರಂಗಿಪೇಟೆಯಲ್ಲಿ ಇಂದು, ನಾಳೆ ಕನ್ನಡ ನುಡಿಜಾತ್ರೆ, ತಾಲೂಕು 19ನೇ ಸಾಹಿತ್ಯ ಸಮ್ಮೇಳನ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ತಾಲೂಕಿನ ಫರಂಗಿಪೇಟೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಸಾಹಿತ್ಯ ಜಾತ್ರೆ. ಸೇವಾಂಜಲಿಯಲ್ಲಿ ಡಿ.7 ಮತ್ತು 8ರಂದು 19ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಫರಂಗಿಪೇಟೆಯಲ್ಲಿ ಹಾದು ಹೋಗುವ ರಸ್ತೆಯ ಡಿವೈಡರ್ ಗಳಲ್ಲಿ ಕಂಬಗಳನ್ನು ನೆಟ್ಟು ಅದರಲ್ಲಿ ಕನ್ನಡ ಧ್ವಜ ಹಾರಾಡುತ್ತಿದ್ದರೆ, ಮೆರವಣಿಗೆಗೆ ನಾನಾ ತಂಡಗಳು ಈಗಾಗಲೇ ಸಜ್ಜಾಗಿವೆ. ಎರಡು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ನಾನಾ ಗೋಷ್ಠಿಗಳು, ಯಕ್ಷಗಾನ, ನಾಟಕ, ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ.

ಉದ್ಘಾಟನೆ:

ಸಂಜೆ ನಡೆಯುವ ಸಮಾರಂಭದಲ್ಲಿ  ವೈ.ಎಸ್.ವಿ.ದತ್ತ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಿಂದಿನ ಸಮ್ಮೇಳನಾಧ್ಯಕ್ಷ ಪಾದೇಕಲ್ಲು ವಿಷ್ಣು ಭಟ್ಟ ಮತ್ತು ಇತರರು ಉಪಸ್ಥಿತರಿರುವರು.

27 ವರ್ಷಗಳ ಇತಿಹಾಸ:

ಪ್ರೊ.ತುಕಾರಾಮ ಪೂಜಾರಿ ಅಧ್ಯಕ್ಷತೆಯಲ್ಲಿ ಡಿ.7 ಮತ್ತು 8ರಂದು ನಡೆಯುವ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ 27 ವರ್ಷಗಳ ಮೊದಲೇ ನರಹರಿ ಪರ್ವತದಲ್ಲಿ ಪ್ರಥಮ ಸಾಹಿತ್ಯ ಸಮ್ಮೇಳನ ನಡೆದಿತ್ತು. ಫರಂಗಿಪೇಟೆಯ ಸೇವಾಂಜಲಿಯಲ್ಲಿ ನಡೆಯುತ್ತಿರುವುದು 19ನೇ ಸಾಹಿತ್ಯ ಸಮ್ಮೆಳನ.

ಬಂಟ್ವಾಳ  ತಾಲೂಕು ಮಟ್ಟದ ಮೊದಲನೇ ಸಮ್ಮೇಳನ 1992ರ ಏಪ್ರಿಲ್ 5ರಂದು ನರಹರಿ ಪರ್ವತದಲ್ಲಿ. ಆಗ ಅಧ್ಯಕ್ಷರಾಗಿದ್ದುದು ಪಡಾರು ಮಹಾಬಲೇಶ್ವರ ಭಟ್ಟ. ತಂಪಾದ ಗಾಳಿ, ಬೆಟ್ಟದ ತುದಿಯಲ್ಲಿ ಸಾಹಿತ್ಯದೌತಣ ಅಂದು ಸೇರಿದ್ದವರನ್ನು ಹೊಸ ದಿಕ್ಕಿಗೆ ಒಯ್ದಿತ್ತು.

ಅದಾಗಿ ಎರಡು ವರ್ಷಗಳಲ್ಲಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆಯಲ್ಲಿ ಎರಡನೇ ಸಮ್ಮೇಳನ ನಡೆಯಿತು. ಬಂಟ್ವಾಳ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ 1994ರಂದು ಈ ನುಡಿಹಬ್ಬ ನಡೆದಿತ್ತು.
ಕನ್ನಡದ ಕಲ್ಹಣ ಎಂದೇ ಖ್ಯಾತರಾಗಿದ್ದ ನೀರ್ಪಾಜೆ ಭೀಮ ಭಟ್ಟ ಅಧ್ಯಕ್ಷತೆಯಲ್ಲಿ 3ನೇ ಸಾಹಿತ್ಯ ಸಮ್ಮೇಳನ ಸತ್ಯಸಾಯಿ ವಿಹಾರ ಅಳಿಕೆಯಲ್ಲಿ 1995ರಲ್ಲಿ ನಡೆದರೆ, ಶಿರಂಕಲ್ಲು ಈಶ್ವರ ಭಟ್ಟ ಅಧ್ಯಕ್ಷತೆಯಲ್ಲ ನಾಲ್ಕನೇ ಸಮ್ಮೇಳನ 1996ರಲ್ಲಿ ವಿಟ್ಲ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ನಡೆಯಿತು. 5ನೇ ಸಮ್ಮೇಳನ ಕವಿ ಗಣಪತಿ ದಿವಾಣ ಅಧ್ಯಕ್ಷತೆಯಲ್ಲಿ 1997ರಲ್ಲಿ ಕಾರಿಂಜೇಶ್ವರ ಸನ್ನಿಧಿಯಲ್ಲಿ ನಡೆಯಿತು. ಇರಾ ಶಾಲಾ ವಠಾರದಲ್ಲಿ 6ನೇ ಸಾಹಿತ್ಯ ಸಮ್ಮೇಳನ ಕೈಂತಜೆ ನರಸಿಂಹ ಭಟ್ಟರ ಅಧ್ಯಕ್ಷತೆಯಲ್ಲಿ 1998ರಲ್ಲಿ ಸಂಪನ್ನಗೊಂಡಿತು.
7ನೇ ಸಾಹಿತ್ಯ ಸಮ್ಮೆಳನ ಪತ್ರಕರ್ತ, ಸಾಹಿತಿ ವಿ.ಬಿ.ಹೊಸಮನೆ ಅಧ್ಯಕ್ಷತೆಯಲ್ಲಿ ಉಳಿ ಶ್ರೀ ಪಂಚದುರ್ಗಾ ದೇವಸ್ಥಾನದಲ್ಲಿ 1999ರಲ್ಲಿ ನಡೆದರೆ, 8ನೇಯದ್ದು ಏರ್ಯ ಚಂದ್ರಭಾಗಿ ರೈ ಅಧ್ಯಕ್ಷತೆಯಲ್ಲಿ ಮುಡಿಪು ಗೋಪಾಲಕೃಷ್ಣ ಸಭಾಭವನದಲ್ಲಿ 2001ರಲ್ಲಿ ನಡೆದಿತ್ತು. 2002ರಲ್ಲಿ ಕವಿ, ಸಾಹಿತಿ, ವಿಮರ್ಶಕ ವಿ.ಗ.ನಾಯಕ ಅಧ್ಯಕ್ಷತೆಯಲ್ಲಿ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ 9ನೇ ಸಾಹಿತ್ಯ ಸಮ್ಮೇಳನ ನಡೆಯಿತು.
10ನೇ ಸಾಹಿತ್ಯ ಸಮ್ಮೇಳನ ಕಥೆಗಾರ್ತಿ ಗಂಗಾ ಪಾದೇಕಲ್ ಅಧ್ಯಕ್ಷತೆಯಲ್ಲಿ ಕನ್ಯಾನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 2003ರಲ್ಲಿ ನಡೆದರೆ, 11ನೇಯದ್ದು ಅಂಶುಮಾಲಿ ಅಧ್ಯಕ್ಷತೆಯಲ್ಲಿ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ 2004ರಲ್ಲಿ ನಡೆಯಿತು.
ನಂದಾವರದಲ್ಲಿ 2006ರಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನ ನಡೆಯಿತು. ಫೆ.11, 12ರಂದು ನಡೆದ ಆ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ.ವಾಮನ ನಂದಾವರ ವಹಿಸಿದ್ದರು. 13ನೇ ಸಾಹಿತ್ಯ ಸಮ್ಮೇಳನ ವಿದ್ವಾಂಸ ಪಾದೇಕಲ್ಲು ನರಸಿಂಹ ಭಟ್ಟ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ 2009ರಲ್ಲಿ ನಡೆದರೆ, ಸರಪಾಡಿಯಲ್ಲಿ 2011ರಲ್ಲಿ ಶಿಕ್ಷಣ ತಜ್ಞ ಸಿ.ಎಚ್.ಕೃಷ್ಣ ಶಾಸ್ತ್ರೀ ಬಾಳಿಲ ಅಧ್ಯಕ್ಷತೆಯಲ್ಲಿ 14ನೇ ಸಮ್ಮೇಳನ ನಡೆಯಿತು. 15ನೇ ಸಾಹಿತ್ಯ ಸಮ್ಮೇಳನ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅಧ್ಯಕ್ಷತೆಯಲ್ಲಿ ಕಲ್ಲಡ್ಕ ಉಮಾಶಿವ ಕ್ಷೇತ್ರ ದಲ್ಲಿ 2012ರಂದು ನಡೆದರೆ, ಡಾ. ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ 2014ರಲ್ಲಿ 16ನೇ ಸಾಹಿತ್ಯ ಸಮ್ಮೇಳನ ನಡೆಯಿತು. ಸಿದ್ಧಕಟ್ಟೆಯಲ್ಲಿ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಅಧ್ಯಕ್ಷತೆಯಲ್ಲಿ 2017ರಲ್ಲಿ 17ನೇ ಸಮ್ಮೇಳನ ನಡೆದರೆ, 2018ರಲ್ಲಿ ಪುಣಚದಲ್ಲಿ ಡಾ. ಪಾದೇಕಲ್ಲು ವಿಷ್ಣು ಭಟ್ಟರ ಅಧ್ಯಕ್ಷತೆಯಲ್ಲಿ 18ನೇ ಸಮ್ಮೇಳನ ನಡೆಯಿತು.

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ನಾಲ್ಕು ಜಿಲ್ಲಾ ಸಮ್ಮೇಳನ ನಡೆಸಿದ ಹೆಗ್ಗಳಿಕೆಯೂ ಇದೆ. ನೀರ್ಪಾಜೆ ಭೀಮ ಭಟ್ಟ ಅಧ್ಯಕ್ಷತೆಯಲ್ಲಿ 2000ನೇ ಇಸವಿಯಲ್ಲಿ ಮೊಡಂಕಾಪಿನಲ್ಲಿ ನಡೆದ ಜಿಲ್ಲಾ ಸಮ್ಮೇಳನದ ಸಂದರ್ಭವೇ ಕನ್ನಡ ಭವನಕ್ಕೆ ಶಂಕುಸ್ಥಾಪನೆ ನಡೆದಿತ್ತು. ಬಳಿಕ ಬಂಟ್ವಾಳ ಶ್ರೀ ಮಂಜುನಾಥೇಶ್ವರ ಸಭಾಭವನದಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮ್ಮೇಳನ 2004ರಲ್ಲಿ ನಡೆಯಿತು. ಅಳಿಕೆಯಲ್ಲಿ ಡಾ.ತಾಳ್ತಜೆ ವಸಂತ ಕುಮಾರ ಅಧ್ಯಕ್ಷತೆಯಲ್ಲಿ 2011ರಲ್ಲಿ ಜಿಲ್ಲಾ ಸಮ್ಮೇಳನ ನಡೆದರೆ, ಪೊಳಲಿಯಲ್ಲಿ 2014ರಂದು ಕೆ.ಪಿ.ರಾವ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮ್ಮೇಳನ ನಡೆಯಿತು.
ಉದಯಶಂಕರ ನೀರ್ಪಾಜೆ ತಾಲೂಕು ಕ.ಸಾ.ಪ. ಅಧ್ಯಕ್ಷರಾಗಿದ್ದಾಗ ಮೂರು ಹೋಬಳಿ ಸಮ್ಮೇಳನಗಳೂ ಇಲ್ಲಿ ನಡೆದಿವೆ. ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ರಾಜಮಣಿ ರಾಮಕುಂಜ ಅಧ್ಯಕ್ಷತೆಯಲ್ಲಿ ಬಂಟ್ವಾಳ ಹೋಬಳಿ ಸಮ್ಮೇಳನ 2003ರಲ್ಲಿ ವಿಟ್ಲ ಹೋಬಳಿ ಸಮ್ಮೇಳನ  ಮುಳಿಯ ಶಂಕರ ಭಟ್ ಅಧ್ಯಕ್ಷತೆಯಲ್ಲಿ ಹಾಗೂ ಪಾಣೆಮಂಗಳೂರು ಹೋಬಳಿ ಸಮ್ಮೇಳನ ಹಾ.ಮ.ಸತೀಶ ಅಧ್ಯಕ್ಷತೆಯಲ್ಲಿ ಗೋಳ್ತಮಜಲು ಹಿ.ಪ್ರಾ.ಶಾಲೆಯಲ್ಲಿ ನಡೆದಿತ್ತು.

19ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ತುಕಾರಾಮ ಪೂಜಾರಿ ಅವರು ಇತಿಹಾಸದ ಕುರಿತು ಪುಸ್ತಕಗಳನ್ನು ಬರೆದು, ಸಂಪಾದಿಸಿದ್ದಾರೆ. ಬಂಟ್ವಾಳ ಇತಿಹಾಸ ದರ್ಶನ, ಕಣ್ಮರೆಯಾಗುತ್ತಿರುವ ತುಳು ಬದುಕು, ಸಿರಿ ಸಂಪದ, ತತ್ವಾನ್ವೇಷಣೆ, ಸಂಚಿ, ಬೈದ್ಯ ದರ್ಶನ ಪುಸ್ತಕಗಳನ್ನು ಸಂಪಾದಿಸಿರುವ ಅವರ ಪ್ರಮುಖ ಸಾಧನೆಗಳಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ಸ್ಥಾಪನೆ, ರಾಷ್ಟ್ರದ ಏಕೈಕ ರಾಣಿ ಅಬ್ಬಕ್ಕ ಕಲಾಗ್ಯಾಲರಿ, ಮತ್ತು ಎಸ್.ಯು.ಪಣಿಯಾಡಿ ಗ್ರಂಥಾಲಯ ಮತ್ತು ನಾಣ್ಯಶಾಸ್ತ್ರ ವಿಭಾಗವನ್ನು ಸ್ಥಾಪಿಸಿದ್ದಾರೆ. ಸಂಶೋಧನೆ ಮತ್ತು ತುಳು ಬದುಕಿನ ಕುರಿತು ಅಧ್ಯಯನ ಮಾಡಿರುವ ಪ್ರೊ. ತುಕಾರಾಮ ಪೂಜಾರಿ ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ಸುಮಾರು 30 ವರ್ಷ ಪ್ರಾಧ್ಯಾಪಕರಾಗಿದ್ದವರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದ ಇವರು ವಿವಿಧ ಪುಸ್ತಕಗಳ ಸಂಪಾದನೆ ಮತ್ತು ಪ್ರಕಟಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ.

ಸಮ್ಮೇಳನ ಉದ್ಘಾಟಿಸಲಿರುವ ಹಿರಿಯ ಚಿಂತಕ ವೈಎಸ್.ವಿ.ದತ್ತ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನವರು.
ಯುಗಟಿ ಸೂರ್ಯನಾರಾಯಣ ರಾವ್ ವೆಂಕಟೇಶ್ವರಯ್ಯ ದತ್ತ ಇವರ ಪೂರ್ಣ ಹೆಸರು. ಹಿರಿಯ ಸಾಹಿತಿ ಕೀ.ರಂ.ನಾಗರಾಜ್ ಅವರಿಂದ ಬಾಲ್ಯದಿಂದಲೇ ಇವರು ಸಾಹಿತ್ಯದ ಬಗ್ಗೆ ಒಲವು ಗಳಿಸಿಕೊಂಡವರು. ಬಿಎಸ್ಸಿ ಪದವೀಧರರಾಗಿರುವ ಇವರು ೪೦ ವರ್ಷ ಎಸ್‌ಎಸ್‌ಎಲ್‌ಸಿ, ಪಿಯೂಸಿ ಮತ್ತು ಬಿಎಸ್ಪಿ ವಿದ್ಯಾರ್ಥಿಗಳಿಗೆ ಟ್ಯುಟೋರಿಯಲ್ ಮೂಲಕ ಗಣಿತ ಮತ್ತು ರಸಾಯನಶಾಸ್ತ್ರ ಬೋಧಿಸಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ ಅವರ ಕರೆಯಂತೆ ರಾಜಕೀಯ ಪ್ರವೇಶಿಸಿ, ವಿಧಾನಪರಿಷತ್-೬ವರ್ಷ, ವಿಧಾನಸಭೆ-೫ವರ್ಷ ಹೀಗೆ ೧೧ ವರ್ಷಗಳಲ್ಲಿ ರಾಜಕೀಯ ರಂಗದಲ್ಲಿ ಅಪರೂಪದ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದಾರೆ.

ಶಿಕ್ಷಕರಿಗೆ ಅನ್ಯಕಾರ್ಯನಿಮಿತ್ತ ರಜೆ:

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಅಲ್ಲಿ ಭಾಗವಹಿಸುವ ಬಂಟ್ವಾಳ ತಾಲೂಕಿನ ಶಿಕ್ಷಕರು ಮತ್ತು ಮಂಗಳೂರು ತಾಲೂಕಿನ ಗಡಿ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಅನ್ಯಕಾರ್ಯನಿಮಿತ್ತ ರಜೆ ಸೌಲಭ್ಯ ಒದಗಿಸಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ. ಹಾಜರಾತಿ ಪ್ರಮಾಣಪತ್ರವನ್ನು ಒದಗಿಸಿದರೆ ಈ ಸೌಲಭ್ಯವನ್ನು ಒದಗಿಸಲಾಗುವುದಾಗಿ ಅವರು ಹೇಳಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts