ಮಾಜಿ ಸಚಿವ, ಚಿತ್ರನಟ ಅಂಬರೀಶ್ ನಿಧನ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಬಂಟ್ವಾಳದ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭ ಮತ್ತು 94ಸಿ ಮತ್ತು 94ಸಿಸಿ ಹಕ್ಕುಪತ್ರ ವಿತರಣಾ ಸಮಾರಂಭ ಡಿ.9ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ.
ಬಂಟ್ವಾಳ ತಾಲೂಕು ಕಂದಾಯ ಇಲಾಖೆ, ಪುರಸಭೆ ಬಂಟ್ವಾಳ ಆಶ್ರಯದಲ್ಲಿ ನಡೆಯುವ ಈ ಸಮಾರಂಭ ತಾಲೂಕು ಕಚೇರಿ ಪ್ರಾಂಗಣದಲ್ಲಿ ನಡೆಯುವುದು. ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮತ್ತು ಹಕ್ಕುಪತ್ರ ವಿತರಣೆಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನಡೆಸುವರು. ಈ ಸಂದರ್ಭ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನಪರಿಷತ್ತು ವಿರೋಧ ಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪುತ್ತೂರು ಶಾಸಕ ಸಂಜೀವ ಮಠಂದುರು, ವಿಧಾನಪರಿಷತ್ತು ಸದಸ್ಯ ಐವನ್ ಡಿಸೋಜ, ಪ್ರತಾಪ್ ಚಂದ್ರ ಶೆಟ್ಟಿ, ಬಿ.ಎಂ.ಫಾರೂಕ್, ಹರೀಶ್ ಕುಮಾರ್, ಆಯನೂರು ಮಂಜುನಾಥ, ಭೋಜೇಗೌಡ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ವಿವಿಧ ಅಕಾಡಮಿಗಳ ಅಧ್ಯಕ್ಷರಾದ ಎ.ಸಿ.ಭಂಡಾರಿ, ಆರ್.ಪಿ.ನಾಯ್ಕ, ಕರಂಬಾರು ಮಹಮ್ಮದ್, ಪಿ.ಸಿ.ಜಯರಾಮ, ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಜಿಪಂ ಇಒ ಡಾ. ಸೆಲ್ವಮಣಿ ಆರ್, ಎಸ್ಪಿ ಡಾ. ಬಿ.ಆರ್.ರವಿಕಾಂತೇಗೌಡ ಭಾಗವಹಿಸುವರು ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ ಬಿ.ಸಿ.ರೋಡ್ ಮಿನಿ ವಿಧಾನಸೌಧದ ಬಳಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾದ ಬಳಿಕ ತಾಲೂಕು ಕಚೇರಿ ಪ್ರಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
94ಸಿ ಹಕ್ಕುಪತ್ರ ಮತ್ತು ಇಂದಿರಾ ಕ್ಯಾಂಟೀನ್ ಆವರಣ ಗೋಡೆ ಎರಡು ರಾಜಕೀಯ ಪಕ್ಷಗಳ ಸಂಘರ್ಷಕ್ಕೆ ಕಾರಣವಾಗಿತ್ತು. ಬಳಿಕ ಕಾಂಪೌಂಡ್ ಬದಲು ಸರಳಿನ ಆವರಣ ನಿರ್ಮಿಸಲಾಯಿತು. ಉದ್ಘಾಟನೆಗೆ ಮತ್ತು ಹಕ್ಕುಪತ್ರ ವಿತರಣೆಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಬರುವ ಕುರಿತು ಕಾರ್ಯಕ್ರಮ ನಿಗದಿಯಾಗಿತ್ತು. ಅಂಬರೀಶ್ ನಿಧನ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಯಿತು ಇದೀಗ ಕ್ಯಾಂಟೀನ್ ಉದ್ಘಾಟನೆ ನಡೆಯುವ ಕುರಿತು ಮಾಜಿ ಸಚಿವ ರಮಾನಾಥ ರೈ ಪ್ರತ್ಯೇಕ ಪತ್ರಿಕಾ ಹೇಳಿಕೆಯನ್ನು ನೀಡಿದ್ದರೆ, ಕಂದಾಯ ಇಲಾಖೆಯಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.