ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಆರಾಧನಾ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರೀ ದೇವಿ ದೇವಸ್ಥಾನ ಪುನರ್ ನಿರ್ಮಾಣಗೊಳ್ಳುತ್ತಿದ್ದು ಮುಂದಿನ ವರ್ಷದ ಮಾ. 4 ರಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಆರಂಭಗೊಂಡು, 13 ರತನಕ ನಡೆಯಲಿದೆ. 13ರಂದು ಬ್ರಹ್ಮಕಲಶೋತ್ಸವ ದ ಬಳಿಕ ಮಾ.14ರಿಂದ ಒಂದು ತಿಂಗಳು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ .
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ದೇವಳದಲ್ಲಿ ಇರಿಸಿದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದೇವಳದ ಜೀಣೋದ್ದಾರ ಕಾರ್ಯವನ್ನು ಕೈಗೊಳ್ಳಲಾಗಿದೆ. ದೇವಸ್ಥಾನದ ಎಲ್ಲಾ ಪುನರ್ ನಿರ್ಮಾಣ ಕಾಮಗಾರಿಗೆ 19 ಕೋಟಿ ಅಂದಾಜಿಸಲಾಗಿದ್ದು ಈವರೆಗೆ ದೇಣಿಗೆ ರೂಪದಲ್ಲಿ 6.63 ಕೋಟಿ ರೂಪಾಯಿ ಸಂಗ್ರಹವಾಗಿದೆ. ವಿವಿಧ ಸಮಾಜ ಹಾಗೂ ದಾನಿಗಳ ಸೇವಾ ರೂಪದಲ್ಲಿ ಸುಮಾರು 3.5 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲು ಮುಂದೆ ಬಂದಿರುತ್ತಾರೆ. ಭಕ್ತರು ಹಾಗೂ ಸಂಘ ಸಂಸ್ಥೆಗಳು ಕರಸೇವೆಯ ರೂಪದಲ್ಲಿ ಕೆಲಸವನ್ನು ನಿರ್ವಹಿಸಿರುತ್ತಾರೆ. ದೇವಳದ ನಿಧಿಯಿಂದ 5 ಕೋಟಿ ಖರ್ಚು ಭರಿಸಲು ಸರಕಾರದ ಅನಿಮತಿಯೂ ಸಿಕ್ಕಿದೆ. ಈಗಾಗಲೇ ಒಟ್ಟು 11.71 ಕೋಟಿ ಖರ್ಚು ತಗುಲಿದ್ದು ಎಲ್ಲಾ ಖರ್ಚುಗಳನ್ನು ಜೀಣೋದ್ದಾರದ ಬಾಬ್ತು ಸಂಗ್ರಹವಾದ ದೇಣಿಗೆ ಮತ್ತು ದೇವಳದ ಖಾತೆಯ ಅಭಿವೃದ್ದಿಯಿಂದ ಸಂಗ್ರಹವಾದ 1.72 ಕೋಟಿ ಹಾಗೂ ದೇವಳದ ನಿಧಿಯಿಂದ 3.50 ಕೋಟಿ ಭರಿಸಲಾಗಿದೆ. ಇನ್ನೂ ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ನಿರ್ವಹಿಸಲು ರೂ. 2.5 ಕೋಟಿ ಮೊತ್ತದ ಅಗತ್ಯತೆ ಇದ್ದು ಭಕ್ತರು ಹಾಗೂ ದಾನಿಗಳ ನೆರವು ಅಗತ್ಯ ಎಂದು ವಿನಂತಿಸಿಕೊಂಡರು.
ಈಗಾಗಲೇ ಶೇ. 70ರಷ್ಟು ಕಾರ್ಯ ಪೂರ್ಣಗೊಂಡಿದ್ದು ಇನ್ನೂ ಬಾಕಿ ಉಳಿದರುವ ಕೆಲಸವು ಮುಂದಿನ ಎರಡು ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ, ಮಾರ್ಚ್ 10ರಿಂದ 13 ರೊಳಗೆ ನೂತನ ಧ್ವಜಸ್ತಂಭದ ಧ್ವಜಪ್ರತಿಷ್ಠೆ ಹಾಗೂ ಪರಿವಾರ ದೈವಗಳ ಪ್ರತಿಷ್ಠೆಯೂ ನಡೆಯಲಿದೆ. ಮಾರ್ಚ್ 14ರಿಂದ ಎಂದಿನಂತೆ ಶ್ರೀ ದೇವರ ವಾರ್ಷಿಕ ಮಹೋತ್ಸವ ನಡೆಯಲಿದೆ.
ಮುಂದಿನ ಜನವರಿ 15ರಿಂದ ಸಾವಿರ ಸೀಮೆಯ ಭಕ್ತಾದಿಗಳು ನಿಯಮದಂತೆ ವ್ರತಾಚರಣೆಯಲ್ಲಿ ಇರುವಂತೆ ಸೂಚಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಉಳಿಪಾಡಿಗುತ್ತು ತಾರನಾಥ ಆಳ್ವ,ಅನುವಂಶಿಕ ಮೊಕ್ತೇಶರ ಪ್ರಧಾನ ಅರ್ಚಕ ಮಾಧವ ಭಟ್, ಮೊಕ್ತೇಶರ ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸುಬ್ರಾಯ ಕಾರಂತ ಇದ್ದರು.