ಮೊದಲೇ ರಸ್ತೆ ಹದಗೆಟ್ಟಿದೆ, ಸಣ್ಣ ವಾಹನಗಳೇ ಕಷ್ಟದಲ್ಲಿ ಸಂಚರಿಸುತ್ತವೆ ಹೀಗಿದ್ದರೂ 22 ಚಕ್ರದ ಲಾರಿಯೊಂದು ವಿಟ್ಲ ಮೂಲಕ ಪೆರ್ಲ ಮಾರ್ಗದಲ್ಲಿ ಸಂಚರಿಸಿದ್ದು, ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸಾರಡ್ಕದಲ್ಲಿ ವಶಕ್ಕೆಪಡೆದುಕೊಳ್ಳಲಾಯಿತು.
ಕಲ್ಲಡ್ಕ ವಿಟ್ಲ ಸಾರಡ್ಕ ರಸ್ತೆಯ ಬದಿ ಹಲವು ಕಡೆಯಲ್ಲಿ ಕುಸಿತವಾಗಿದ್ದು, ಘನ ಲಾರಿಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹೀಗಿದ್ದರೂ ನಿತ್ಯ ನೂರಾರು ಜಲ್ಲಿ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಈಗ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಬೇಕಾದ 22ಚಕ್ರದ ಲಾರಿಗಳು ಯಾವುದೇ ಅಡೆ ತಡೆ ಇಲ್ಲದೆ ಸಂಚಾರ ಆರಂಭಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಮಿಳುನಾಡು ಮೂಲದ ಲಾರಿ ಕೇರಳದ ಉಕ್ಕಿನಡ್ಕದಲ್ಲಿ ನಡೆಯುವ ಕಾಮಗಾರಿಗೆ ಕಬ್ಬಿಣವನ್ನು ಸಾಗಾಟ ಮಾಡುತ್ತಿದೆ ಎನ್ನಲಾಗಿದೆ. ಲಾರಿಯನ್ನು ವಶಕ್ಕೆ ಪಡೆದ ವಿಟ್ಲ ಪೊಲೀಸರು, ಬಂಟ್ವಾಳ ಆರ್ ಟಿ ಒ ಕಚೇರಿಗೆ ಹಸ್ತಾಂತರ ಮಾಡಿದ್ದಾರೆ. ಈ ಹಿಂದೆಯೂ ಇದೇ ರಸ್ತೆಯಲ್ಲಿ ಘನ ಲಾರಿಗಳು ಸಂಚರಿಸಿರುವ ಕುರಿತು ದೂರುಗಳು ಕೇಳಿಬಂದಿದ್ದವು.