ಸೋಮವಾರ ಬೆಳಗ್ಗೆ ಸುಮಾರು 4 ಗಂಟೆಯಿಂದ ಮಧ್ಯಾಹ್ನದವರೆಗೆ ಬಂಟ್ವಾಳ ತಾಲೂಕಿನ ಮಾಣಿಯ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಬಳಿಯ ಹಳೀರ ಎಂಬಲ್ಲಿ ಲಾರಿ ಹಾಳಾಗಿ ರಸ್ತೆ ಮಧ್ಯದಲ್ಲೇ ನಿಂತ ಕಾರಣ ವಾಹನ ಸವಾರರು ಬೆವರಿಳಿಸಬೇಕಾಯಿತು.
ಸೋಮವಾರ ಬೆಳಗ್ಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಕಬ್ಬಿಣದ ರಾಡ್ಗಳನ್ನು ಸಾಗಾಟ ಮಾಡುತ್ತಿದ್ದ ಆರು ಚಕ್ರದ ಲಾರಿ ಮಾಣಿಯ ಹಳೀರ ಎಂಬಲ್ಲಿ ರಸ್ತೆ ಮಧ್ಯೆದಲ್ಲಿ ಕೆಟ್ಟು ನಿಂತಿತು. ಮುಂದಕ್ಕೆ ಹೋಗಲಾಗದೇ ರಸ್ತೆಯಲ್ಲಿಯೇ ಬಾಕಿಯಾದ ಕಾರಣ ಅದರ ಹಿಂದೆ, ಮುಂದೆ ವಾಹನಗಳು ಸಾಲುಗಟ್ಟಲು ಆರಂಭಿಸಿದವು. ಬೆಳಿಗ್ಗೆ ಸುಮಾರು 8.30ರ ವರೆಗೆ ಇತರ ವಾಹನಗಳು ಬದಿಯಲ್ಲಿ ತೆರಳಲು ಸಾಧ್ಯವಾಗುತ್ತಿತ್ತು. ಆದರೆ ಬಳಿಕ ವಾಹನ ದಟ್ಟಣೆ ಅಧಿಕವಾಗತೊಡಗಿತು. ಇದರಿಂದ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಸಣ್ಣಪುಟ್ಟ ವಾಹನಗಳು ತೆರಳಿದರೆ, ದೊಡ್ಡ ವಾಹನಗಳಲ್ಲಿದ್ದವರು ತೊಂದರೆ ಅನುಭವಿಸಿದರು. ಇದರಿಂದ ಆಂಬುಲೆನ್ಸ್, ಪರೀಕ್ಷೆಗೆ ಹೋಗುವವರು, ಕಚೇರಿ, ಶಾಲೆಗೆ ಹೋಗುವವರು ತೊಂದರೆಗೊಳಗಾದರು. ಬೆಳಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅದಾದ ಬಳಿಕ ಎಎಸ್ಪಿಯವರಿಗೂ ಮಾಹಿತಿ ನೀಡಲಾಯಿತು. ಕೊನೆಗೆ ಮಧ್ಯಾಹ್ನದ ವೇಳೆ ವಾಹನಗಳು ತೆರಳಲು ವ್ಯವಸ್ಥೆ ಕಲ್ಪಿಸಲಾಯಿತು. ಸ್ಥಳೀಯ ಆಟೋ ಚಾಲಕರು ಹಾಗೂ ಪಿಕಪ್ ಚಾಲಕರು, ಸಾರ್ವಜನಿಕರು ದಾರಿ ಮಾಡಿಕೊಟ್ಟರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ಕುಮಾರ್ ಶೆಟ್ಟಿ ಅವರು ಎರಡು ಜೆಸಿಬಿ ವಾಹನವನ್ನು ಒದಗಿಸಿದರು. ತಾತ್ಕಾಲಿಕವಾಗಿ ಬದಲಿ ರಸ್ತೆ ಮಾಡಿ ಬಳಿಕ ಕೆಟ್ಟು ನಿಂತ ಲಾರಿಯನ್ನು ಉಪ್ಪಿನಂಗಡಿಯ ಕ್ರೇನ್ ಮೂಲಕ ತೆರವುಗೊಳಿಸಿ, ಮುಕ್ತ ಸಂಚಾರಕ್ಕೆ ಅನುಮಾಡಿಕೊಡಲಾಯಿತು. ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.