ಪೆರಾಜೆ ಗ್ರಾಮ ದ ಅಶ್ವತ್ಥಡಿ ಎಂಬಲ್ಲಿ ಯುವ ವೇದಿಕೆ ನೇತೃತ್ವದಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.
ಸುಮಾರು 14 ವರ್ಷಗಳ ಹಿಂದೆ ಬಿಜೆಪಿಯಿಂದ ಆಯ್ಕೆಗೊಂಡಿದ್ದ ಶಕುಂತಳಾ ಶೆಟ್ಟಿ ಪುತ್ತೂರು ಶಾಸಕಿಯಾಗಿದ್ದ ಸಂದರ್ಭ ಇದೇ ಜಾಗದಲ್ಲಿ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಗಿತ್ತು. ಈ ಸಂದರ್ಭ ವೇಗದೂತ ಬಸ್ಸುಗಳು ನಿಲುಗಡೆಗೊಳ್ಳುವಂತೆ ಶಾಸಕಿ ಸೂಚಿಸಿದ್ದರು. ಮಾಣಿ ಶ್ರೀ ರಾಮಚಂದ್ರಾಪುರ ಮಠ ಸಹಿತ ಹಲವು ಪ್ರದೇಶಗಳಿಗೆ ಇಲ್ಲಿ ಎಕ್ಸ್ ಪ್ರೆಸ್ ಬಸ್ಸುಗಳು ನಿಲ್ಲುವುದರಿಂದ ಬಸ್ಸುಗಳಲ್ಲಿ ಬರುವ ದೂರದೂರಿನ ಪ್ರಯಾಣಿಕರಿಗೆ ಹಾಗೂ ಸ್ಥಳೀಯರಿಗೆ ಇದರಿಂದ ಅನುಕೂಲವಾಗುತ್ತಿತ್ತು. ಆದರೆ ರಸ್ತೆ ಅಗಲಗೊಳ್ಳುವ ಸಂದರ್ಭ ಬಸ್ಸು ನಿಲ್ದಾಣವನ್ನು ಕೆಡಹಲಾಗಿತ್ತು. ಮತ್ತೆ ನಿಲ್ದಾಣ ನಿರ್ಮಿಸುವ ಕುರಿತು ಹಲವು ಮನವಿಗಳನ್ನು ನೀಡಲಾಗಿದ್ದರೂ ಪ್ರಯೋಜನವಾಗಿರಲಿಲ್ಲ. ಸಾರ್ವಜನಿಕ ಹಿತದೃಷ್ಠಿ ಹಾಗೂ ಪ್ರಯಾಣಿಕರ ಅನುಕೂಲದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ಯುವ ವೇದಿಕೆ ಸಂಚಾಲಕ ರಾಜಾರಾಮ ಕಾಡೂರು ತಿಳಿಸಿದರು.
ಸ್ಥಳೀಯ ಹಿರಿಯರಾದ ಸುರೇಂದ್ರ ಮತ್ತು ವಿಶ್ವನಾಥ್ ನಿಲ್ದಾಣವನ್ನು ಉದ್ಘಾಟಿಸಿದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಬಜರಂಗದಳ ವಿಟ್ಲ ತಾಲೂಕು ಸಂಚಾಲಕ ಅಕ್ಷಯ್ ಕಲ್ಲಡ್ಕ, ಗ್ರಾಪಂ ಅಧ್ಯಕ್ಷೆ ಪುಷ್ಪಾ, ಸದಸ್ಯರಾದ ಉಮೇಶ್ ಎಸ್.ಪಿ, ಉದ್ಯಮಿ ಪುಷ್ಪರಾಜ ಚೌಟ, ಯುವವೇದಿಕೆ ಸಂಚಾಲಕ ರಾಜಾರಾಮ ಕಾಡೂರು, ಅಧ್ಯಕ್ಷ ಅಜಿತ್ ಬುಡೋಳಿ, ಕಾರ್ಯದರ್ಶಿ ಯತಿರಾಜ ಪೆರಾಜೆ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.