ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಶಾಸಕರು ವಿಧಾನಸಭೆಯಲ್ಲಿ ಗಾಂಜಾ ಮಾಫಿಯಾ ಕುರಿತು ಚರ್ಚೆ ನಡೆಸಿದರೂ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮನೆಗೆ ಭೇಟಿ ನೀಡಿದ ಬಳಿಕ ಬಂಟ್ವಾಳದ ಶಾಸಕರ ಕಚೇರಿಯಲ್ಲಿ ಶನಿವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದಾರು ವರ್ಷಗಳಿಂದ ಗಾಂಜಾ ಮಾಫಿಯಾ ಸರಕಾರವನ್ನೇ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದೆ, ಗಾಂಜಾ ಮಾಫಿಯಾದ ಹಿಡಿತಕ್ಕೆ ಒಳಗಾದ ಯುವಕರು ಅತ್ಯಾಚಾರದಂಥ ಕೃತ್ಯ ಎಸಗಿದ್ದು, ಸರಕಾರ ತಕ್ಷಣ ಡ್ರಗ್ ಮಾಫಿಯಾವನ್ನು ನಿಯಂತ್ರಿಸಬೇಕು. ಇಂಥ ಘಟನೆಗಳು ಸರಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತದೆ. ಆರೋಪಿಗಳನ್ನು ಬಂಧಿಸಿದ ಪೊಲೀಸ್ ಇಲಾಖೆಯನ್ನು ಅಭಿನಂದಿಸುತ್ತೇನೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು, ಇದು ಇಡೀ ಜಿಲ್ಲೆ ತಲೆತಗ್ಗಿಸುವ ವಿಷಯ ಎಂದು ಹೇಳಿದರು.
ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಮನೆಗೆ ಇಂದು ಶಾಸಕ ರಾಜೇಶ್ ನಾಯ್ಕ್, ಸ್ಥಳೀಯ ಮುಖಂಡರಾದ ಚೆನ್ನಪ್ಪ ಕೋಟ್ಯಾನ್ ಮತ್ತಿತರೊಂದಿಗೆ ಭೇಟಿ ನೀಡಿದ್ದೇವೆ ನಾನು ಮತ್ತು ಶಾಸಕರು ಸಂತ್ರಸ್ತೆಗೆ ಧೈರ್ಯ ಹೇಳಿದ್ದೇವೆ. ಈ ಕುಟುಂಬ ತೀರಾ ಬಡತನದಲ್ಲಿದ್ದು, ಸರಕಾರ ಪರಿಹಾರವನ್ನು ತಕ್ಷಣ ಶಾಸಕರ ಮೂಲಕ ನೀಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರ ದಕ್ಷಿಣ ಕನ್ನಡ ಮತ್ತು ಕೊಡಗಿಗೆ ಒಟ್ಟು 720 ಕೋಟಿ ರೂಗಳನ್ನು ಪ್ರಾಕೃತಿಕ ಪರಿಹಾರ ಘೋಷಿಸಿದಂತೆ 546.21 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ರಾಜನಾಥ ಸಿಂಗ್ ಅವರನ್ನು ಅಭಿನಂದಿಸುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಳೆರೋಗದಿಂದ ಅಡಕೆ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಪ್ಯಾಕೇಜ್ ಬಿಡುಗಡೆ ಮಾಡಿದರೆ ಮಾತ್ರ ರೈತರಿಗೆ ನೆರವು ನೀಡಿದಂತಾಗುತ್ತದೆ ಕೂಡಲೇ ಬೆಳೆಗಾರರಿಗೆ ಪ್ರತ್ಯೇಕ ಪ್ಯಾಜೇಜ್ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು, ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಪಂ ಮಾಜಿ ಸದಸ್ಯ ಮೋಹನ್ ಪಿ.ಎಸ್, ಬಿಜೆಪಿ ಕಾರ್ಯದರ್ಶಿ ರಮಾನಾಥ ರಾಯಿ ಉಪಸ್ಥಿತರಿದ್ದರು.